ಕೊಡಗಿನಲ್ಲಿ ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ : ನ್ಯಾಯಾಲಯದಿಂದ ತಡೆ ತರಲು ಸಂರಕ್ಷಣಾ ವೇದಿಕೆ ನಿರ್ಧಾರ

30/06/2020

ಮಡಿಕೇರಿ ಜೂ.30 : ಕೊಡಗು ಜಿಲ್ಲೆಯಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಭೂ ಪರಿವರ್ತನೆಗೆ ಸರಕಾರ ಅವಕಾಶ ನೀಡಿರುವುದು ಕಾನೂನು ಬಾಹಿರ ಮತ್ತು ಜಿಲ್ಲೆಯಲ್ಲಿ ಕೃಷಿಯನ್ನೇ ಅವಲಂಬಿಸಿ ಬದುಕುತ್ತಿರುವ ಸಮುದಾಯಕ್ಕೆ ಈ ಕಾನೂನು ಮಾರಕವಾಗಿದೆ ಎಂದು ಆಭಿಪ್ರಾಯಿಸಿರುವ ಕೊಡಗು ಸಂರಕ್ಷಣಾ ವೇದಿಕೆ, ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಈ ಕಾಯ್ದೆಗೆ ತಡೆಯೊಡ್ಡಲು ನಿರ್ಧರಿಸಿದೆ.
ವೇದಿಕೆಯ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಕರ್ನಾಟಕ ಸರಕಾರದ ಆಡಿಟಿಂಗ್ ಜನರಲ್ ಕಚೇರಿಯಿಂದ 2018ರ ಮಾ.18ರಂದು ಕೊಡಗು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರವು ಕೊಡಗು ಜಿಲ್ಲೆಯ ಭತ್ತದ ಗದ್ದೆಗಳು ಮತ್ತು ಕಾಫಿ ತೋಟಗಳ ಹಾಗೂ ಬಾಣೆ ಜಾಗದ ಭೂ ಪರಿವರ್ತನೆ ರಾಜ್ಯದ ಅಸ್ತಿತ್ದಲ್ಲಿರುವ ಕಾನೂನುಗಳಿಗೆ ವಿರುದ್ಧವಾಗಿದೆ ಎಂಬುದನ್ನು ಸಾಬೀತು ಪಡಿಸುತ್ತದೆ. ಕೊಡಗಿನ ಕೃಷಿ ಭೂಮಿ, ಕಾಫಿ ಪ್ಲಾಂಟೇಷನ್ ಮತ್ತು ಬಾಣೆ ಜಾಗವನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆ ಮಾಡಿರುವ ಜಿಲ್ಲಾಧಿಕಾರಿಗಳಾದ ಡಾ. ವಿ.ಎನ್. ಪ್ರಸಾದ್, ಅನುರಾಗ್ ತಿವಾರಿ, ಮೀರ್ ಅನೀಸ್ ಅಹಮ್ಮದ್, ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಮತ್ತು ಪಿ.ಐ ಶ್ರೀವಿದ್ಯಾ ಅವರಿಗೆ ಒಂದು ತಿಂಗಳೊಳಗೆ ಉತ್ತರ ನೀಡುವಂತೆ ಸೂಚಿಸಿದೆ. ಆದರೆ ಇದುವರೆಗೂ ಅವರು ಯಾವುದೇ ಉತ್ತರ ನೀಡಿಲ್ಲ ಎಂದು ರಾಜೀವ್ ಬೋಪಯ್ಯ ಸಭೆಯ ಗಮನಕ್ಕೆ ತಂದರು.
ವೇದಿಕೆಯ ಸಂಚಾಲಕ ನಿವೃತ್ತ ಕರ್ನಲ್ ಚೆಪ್ಪುಡಿರ ಮುತ್ತಣ್ಣ ಅವರು ಮಾತನಾಡಿ, ಕೊಡಗು ಜಿಲ್ಲೆಯ ನಗರೀಕರಣವು ಕೊಡಗಿನ ಭೂ ದೃಶ್ಯಕ್ಕೆ ಮತ್ತು ಕಾವೇರಿ ನದಿಗೆ ಹಾನಿಕಾರಕವಾಗಿದೆ ಎಂಬುದನ್ನು ಐ.ಐ.ಎಸ್.ಸಿ ನೀಡಿದ ವರದಿ ಸಾಬೀತು ಪಡಿಸುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆಯಲಾಗಿದ್ದು, ರಾಜ್ಯ ಸರಕಾರದ ಈ ಅಕ್ರಮ ಆದೇಶವನ್ನು ರದ್ದುಗೊಳಿಸುವಂತೆ ಕಾನೂನು ತಜ್ಞರ ನೆರವು ಪಡೆದು ಮುಂದಿನ ಹೋರಾಟ ರೂಪಿಸಬೇಕಾಗಿದೆ ಎಂದರು.
ಈ ಹಿಂದೆ ಕೊಡಗಿನ ಕೃಷಿ ಭೂಮಿ ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆಯಾಗಿರುವುದು ಕಾನೂನು ಬಾಹಿರವಾಗಿದೆ. ಪ್ರಸ್ತುತ ಸರಕಾರದ ಕಾಯಿದೆಯಂತೆ ಜಿಲ್ಲೆಯ ಕಾಫಿ ಪ್ಲಾಂಟೇಷನ್, ಕೃಷಿ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆ ಮಾಡಿದರೆ, ನ್ಯಾಯಾಲಯ ನೀಡುವ ಆದೇಶದಂತೆ ಭೂ ಪರಿವರ್ತನೆಯಾದ ಜಾಗ ಹಾಗೂ ವಾಣಿಜ್ಯ ಉದ್ದೇಶದ ನಿವೇಶನ, ಕಟ್ಟಡ ಕಾನೂನು ಬಾಹಿರವಾಗಿರುತ್ತದೆ. ಆದ್ದರಿಂದ ಜನರು ವಾಣಿಜ್ಯ ಉದ್ದೇಶಕ್ಕೆ ಭೂ ಖರೀದಿಸುವುದು ಹಾಗೂ ಪರಿವರ್ತಿಸುವುದಕ್ಕೆ ಮುಂದಾಗಬಾರದು ಎಂದು ಕಿವಿಮಾತು ಹೇಳಿದರು.
ಭೂ ಪರಿವರ್ತನೆ ರದ್ದುಗೊಳಿಸುವ ನ್ಯಾಯಾಲಯದ ಆದೇಶವಿರಬಹುದು ಮತ್ತು ಭೂ ಪರಿವರ್ತನೆ ಕಾನೂನು ಬಾಹಿರವಾದುದರಿಂದ ಯಾವುದೇ ನಿರ್ಮಾಣವನ್ನು ಸಹ ಕೆಡವಬಹುದು ಎಂದು ಎಚ್ಚರಿಸಿದರು.
ನ್ಯಾಯಾಲಯದ ಆದೇಶದಂತೆ ಕಾನೂನು ಬಾಹಿರ ನಿರ್ಮಾಣಗಳನ್ನು ಕೇರಳ ರಾಜ್ಯದಲ್ಲಿ ಕೆಡವಿರುವುದು ಮತ್ತು ಮುಂಬೈ ಮಹಾನಗರದಲ್ಲಿ ಕೆಡವಲು ಆದೇಶ ಹೊರಡಿಸಿರುವುದನ್ನು ಅವರು ಉದಾಹರಿಸಿದರು.
ಕೊಡಗಿನಲ್ಲಿ ಜನರಿಗೆ ತೊಂದರೆ ಉಂಟುಮಾಡುವ ಉದ್ದೇಶ ನಮಗಿಲ್ಲ. ತಮ್ಮ ಸ್ವಂತ ಮನೆ ನಿರ್ಮಾಣ ಹಾಗೂ ಇತರ ಕೃಷಿಗೆ ಸಂಬಂಧಿಸಿದ ಕಾಮಗಾರಿಗೆ ಪರಿವರ್ತನೆ ಮಾಡಲು ವಿರೋಧ ಮಾಡುವುದಿಲ್ಲ. ಆದರೆ ಕೊಡಗಿನಲ್ಲಿ ನಗರೀಕರಣ ಮತ್ತು ಕೃಷಿಯೇತರ ಉದ್ದೇಶಕ್ಕೆ ಭೂಮಿ ಪರಿವರ್ತನೆಯಾಗುವುದು ಮುಂದುವರೆದರೆ ಕೇರಳ ಮತ್ತು ಆಂಧÀ್ರದ ಹಣವಂತರು ದೊಡ್ಡ ಮಟ್ಟದಲ್ಲಿ ಭೂ ಖರೀದಿ ಮಾಡುತ್ತಾರೆ. ಇದು ಅಳಿವಿನಂಚಿನಲ್ಲಿರುವ ಸ್ಥಳೀಯ ಸಮುದಾಯಗಳಿಗೆ ಮಾರಕವಾಗಲಿದೆ. ಕೊಡಗು ಜಿಲ್ಲೆಯನ್ನು ನಮ್ಮ ತಾಯ್ನಾಡು ಎಂದು ಕರೆಯಲು ಇನ್ನು ಮುಂದೆ ಸಾಧ್ಯವಾಗದೇ ಇರಬಹುದು ಎಂದು ಸಭೆಯಲ್ಲಿ ಪ್ರಮುಖರು ಕಳವಳ ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆಯ ಕೃಷಿ ಪ್ರದೇಶ ಕಾವೇರಿ ಮತ್ತು ಲಕ್ಷ್ಮಣ ತೀರ್ಥ ನದಿ ಸೇರಿದಂತೆ ಇತರ ಎಲ್ಲಾ ನದಿಗಳಿಗೆ ನೀರಿನ ಇಳುವರಿ ನೀಡುವ ಪೂರಕ ಪ್ರದೇಶವಾಗಿದೆ. ಇಂತಹ ಕೃಷಿ ಭೂಮಿಯನ್ನು ವಾಣಿಜ್ಯೀಕರಣಗೊಳಿಸುವ ಕಾಯಿದೆ ದಕ್ಷಿಣ ಭಾರತದ 8 ಕೋಟಿ ಜನರಿಗೆ ಕೃಷಿ ಹಾಗೂ ಕುಡಿಯುವ ನೀರು ಒದಗಿಸುವ ಕಾವೇರಿ ನದಿ ಬರಡಾಗುವ ಅಪಾಯ ತಂದೊಡ್ಡಲಿದೆ. ಕೃಷಿಯನ್ನೇ ಅವಲಂಬಿಸಿರುವ ಜಿಲ್ಲೆಯ ಜನರು ತಮ್ಮ ಕೃಷಿ ಭೂಮಿಯನ್ನು ಕಳೆದುಕೊಂಡು ಅಭದ್ರತೆಯನ್ನು ಎದುರಿಸಬೇಕಾಗುತ್ತದೆ ಎಂದು ಅಭಿಪ್ರಾಯಿಸಲಾಯಿತು.
ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಂಬಲ ಬೆಲೆ, ಪರಿಸರ ಸೇವೆಗಳಿಗೆ ಪಾವತಿ ಇತ್ಯಾದಿ ಮೂಲಕ ಕೊಡಗಿನ ಜನರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ವಿಧಾನಗಳ ಬಗ್ಗೆ ವೇದಿಕೆಯಿಂದ ಪ್ರಯತ್ನಿಸಲಾಗುತ್ತಿದೆ. ಜನರು ತಾಳ್ಮೆಯಲ್ಲಿದ್ದು, ತ್ವರಿತ ಹಣಕ್ಕಾಗಿ ಕೃಷಿ ಭೂಮಿಯ ವಾಣಿಜ್ಯ ಪರಿವರ್ತನೆಗೆ ಹೋಗದಂತೆ ಮನವಿ ಮಾಡಲಾಯಿತು.
ಬ್ಯಾಂಕುಗಳು ಪರಿವರ್ತಿತ ಆಸ್ತಿಗಳನ್ನು ಅಡಮಾನ ಪಡೆದು ಸಾಲ ನೀಡುವಂತಹ ಕೆಲವು ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಪರಿವರ್ತಿತವಲ್ಲದ ಕೃಷಿ ಭೂಮಿಗೂ ಸೂಕ್ತ ಸಾಲ ನೀಡುವಂತೆ ನಿಯಮ ಜಾರಿಗೊಳಿಸಲು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಈಗಾಗಲೇ ದೊಡ್ಡ ಉದ್ಯಮಿಗಳು, ರಾಜಕಾರಣಿಗಳು ಸಾವಿರಾರು ಎಕರೆ ಜಾಗವನ್ನು ಜಿಲ್ಲೆಯಲ್ಲಿ ಖರೀದಿಸಿದ್ದು, ಅವುಗಳನ್ನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತಿಸಲು ಸರಕಾರದ ಮೇಲೆ ಒತ್ತಡ ಹೇರಿ ಪರಿವರ್ತನೆ ಮಾಡಿ ಲಾಭ ಮಾಡಿಕೊಳ್ಳಲು ಇಂತಹ ಕಾನೂನುಗಳನ್ನು ತರಲಾಗುತ್ತಿದೆ ಎಂಬ ಆರೋಪವೂ ಸಭೆಯಲ್ಲಿ ಕೇಳಿ ಬಂದಿತು.
ಸಭೆಯಲ್ಲಿ ಅಮ್ಮತ್ತಿ ರೈತ ಸಂಘದ ಐನಂಡ ಜಪ್ಪು ಅಚ್ಚಪ್ಪ, ಪಟ್ಟಡ ಅರುಣ್ ಚಂಗಪ್ಪ, ದೇವ್ ಉತ್ತಯ್ಯ, ಪೆÇನ್ನಂಪೇಟೆ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಐನಂಡ ಕೆ. ಮಂದಣ್ಣ, ಕರ್ನಾಟಕ ರಾಜ್ಯ ರೈತ ಸಂಘದ (ಪೆÇ್ರ. ನಂಜುಂಡ ಸ್ವಾಮಿ ಬಣ) ಜಿಲ್ಲಾಧ್ಯಕ್ಷ ಚಿಮ್ಮಂಗಡ ಗಣೇಶ್, ಕಾರ್ಯದರ್ಶಿ ಕಳ್ಳಿಚಂಡ ಧÀನು, ಕೊಡಗು ಬೆಳೆಗಾರರ ಒಕ್ಕೂಟದ ತಾಂತ್ರಿಕ ಸಲಹೆಗಾರ ಚೆಪ್ಪುಡಿರ ಶರಿಸುಬ್ಬಯ್ಯ, ಪೆÇನ್ನಂಪೇಟೆ ಕೊಡವ ಸಮಾಜದ ನಿರ್ದೇಶಕ ಮಲ್ಲಮಾಡ ಪ್ರಭು ಪೂಣಚ್ಚ, ಸೇವ್ ಕೊಡಗು ಸಂಘಟನೆಯ ಜಮ್ಮಡ ಗಣೇಶ್ ಅಯ್ಯಣ್ಣ, ಕೊಟ್ಟಂಗಡ ಶೈಲಾ, ಮಂಡೇಪಂಡ ಕುಟ್ಟಣ್ಣ, ಕಾವೇರಿ ಸೇನೆಯ ಅಧ್ಯಕ್ಷ ಕಿಮ್ಮುಡಿರ ರವಿಚಂಗಪ್ಪ, ಜಿ.ಡಿ. ಶಿವಶಂಕರ್ ಮತ್ತಿತರು ಭೂ ಸುದಾರಣೆ ಕಾಯಿದೆ ತಿದ್ದುಪಡಿಯನ್ನು ವಿರೊಧಿಸಿ ಮಾತನಾಡಿದರು.