ಸೋಂಕಿತನ ವಿರುದ್ಧ ಸುಳ್ಳು ಪ್ರಕರಣ ದಾಖಲು ಆರೋಪ : ವಿರಾಜಪೇಟೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯ

June 30, 2020

ಮಡಿಕೇರಿ ಜೂ.30 : ವಿರಾಜಪೇಟೆ ಪಟ್ಟಣದ ಮೀನುಪೇಟೆ ಬಡಾವಣೆಯ ಕೊರೋನಾ ಸೋಂಕಿತ ವ್ಯಕ್ತಿಯ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿರುವ ಪ.ಪಂ ಸದಸ್ಯರು ಹಾಗೂ ಸಾರ್ವಜನಿಕರು ಮುಖ್ಯಾಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಜೂನ್ 20 ರಂದು ದುಬಾಯಿಯಿಂದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದ ಜಿಲ್ಲೆಯ ವ್ಯಕ್ತಿಯೊಬ್ಬರು ಥರ್ಮಲ್ ಸ್ಕ್ರೀನಿಂಗ್ ನಂತರ ಒಂದು ದಿನ ಹೋಮ್ ಕ್ವಾರಂಟೈನ್ ನಲ್ಲಿದ್ದು, ಸೇವಾ ಸಿಂಧು ಪಾಸ್ ಪಡೆದು ಕೊಡಗು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದರು. ವಿರಾಜಪೇಟೆ ಮೀನುಪೇಟೆಯ ಮನೆಗೆ ಬಂದಿದ್ದರು ಎನ್ನಲಾಗಿದ್ದು, ಜೂನ್ 23 ರಂದು ಸ್ಥಳೀಯ ಆಶಾ ಕಾರ್ಯಕರ್ತರು ಮನೆಗೆ ಭೇಟಿ ನೀಡಿ ಕೈಗೆ ಸೀಲ್ ಮಾಡಿ ಹೋಗಿದ್ದರು ಎಂದು ಸೋಂಕಿತ ವ್ಯಕ್ತಿ ಹೇಳಿಕೊಂಡಿರುವುದಾಗಿ ಕೆಲವು ಸದಸ್ಯರು ಗಮನ ಸೆಳೆದರು.
ಮನೆಗೆ ಹೋಮ್ ಕ್ವಾರಂಟೈನ್ ಸ್ಟಿಕ್ಕರ್ ಅಂಟಿಸಿದ್ದು, ಎರಡು ದಿನಗಳು ಕಳೆದರು ಯಾರೂ ಸಹ ವಿಚಾರಿಸಲು ಬಾರದಿದ್ದಾಗ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ ಮಡಿಕೇರಿಯಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಬಳಿಕ ಜೂ.28 ರಂದು ಪರೀಕ್ಷೆಯ ವರದಿ ಬಂದಿದ್ದು ಕೊರೋನಾ ದೃಢಪಟ್ಟಿದೆ ಎಂದು ಹೇಳಲಾಗಿದೆ.
ಇದೀಗ ವ್ಯಕ್ತಿ ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲದ ವಿರಾಜಪೇಟೆ ಪ.ಪಂ ಮುಖ್ಯಾಧಿಕಾರಿ ಅವರು ಸೋಂಕಿತ ವ್ಯಕ್ತಿ ತಾಲ್ಲೂಕು ಆಡಳಿತಕ್ಕೆ ಮಾಹಿತಿ ನೀಡದೆ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂದು ವಿರಾಜಪೇಟೆ ನಗರ ಪೊಲೀಸ್ ಠಾಣೆಗೆ ದೂರು ನೀಡಿರುವುದರಿಂದ ಸೋಂಕಿತ ವ್ಯಕ್ತಿಯ ಮೇಲೆ ಪ್ರಕರಣ ದಾಖಲಾಗಿದೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಎಲ್ಲಾ ನಿಯಮಗಳನ್ನು ಪಾಲಿಸಿ ದುಬಾಯಿಯಿಂದ ಬಂದು ಹೋಮ್ ಕ್ವಾರಂಟೈನ್ ಆಗಿದ್ದ ವ್ಯಕ್ತಿಯ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದರು. ಸೋಂಕಿತ ವ್ಯಕ್ತಿಯ ಹೆಸರನ್ನು ಬಹಿರಂಗ ಪಡಿಸಬಾರದೆಂಬ ನಿಯಮ ಇದ್ದರೂ ಹೆಸರನ್ನು ಬಹಿರಂಗ ಪಡಿಸಿ ಅಧಿಕಾರಿ ನಿಯಮ ಉಲ್ಲಂಘಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು
ವಿರಾಜಪೇಟೆ ನಗರ ಠಾಣೆಗೆ ದೂರು ನೀಡಿದರು.
ಈ ಸಂದರ್ಭ ಸದಸ್ಯರುಗಳಾದ ರಂಜಿ ಪೂಣಚ್ಚ, ರಾಜೇಶ್ ಪದ್ಮನಾಭ, ಮುಹಮ್ಮದ್ ರಾಫಿ, ದೇಚಮ್ಮ ಕಾಳಪ್ಪ, ಸಿ.ಕೆ.ಪೃಥ್ವಿನಾಥ್, ಎಸ್.ಹೆಚ್.ಮತೀನ್ ವಕೀಲರಾದ ಕೃಷ್ಣ, ನರೇಂದ್ರ ಕಾಮತ್, ಸುನೀಲ್ ಮತ್ತಿತರರು ಹಾಜರಿದ್ದರು.