ಕೊಡಗಿನ ಪುಣ್ಯನಂಜಪ್ಪ ಈಗ ಭಾರತೀಯ ಸೇನೆಯ ಪೈಲೆಟ್

30/06/2020

ಮಡಿಕೇರಿ ಜೂ.30 : ಭಾರತೀಯ ವಾಯು ಸೇನೆಯ ಯುದ್ಧ ವಿಮಾನ ಪೈಲೆಟ್ (ಫೈಟರ್ ಪೈಲೆಟ್) ಆಗಿ ಸೈನಿಕ ಪರಂಪರೆಗೆ ಹೆಸರಾದ ಕೊಡಗು ಜಿಲ್ಲೆಯ ಯುವತಿಯೊಬ್ಬರು ಆಯ್ಕೆಯಾಗುವ ಮೂಲಕ ಸೇನಾ ಇತಿಹಾಸಕ್ಕೆ ಹೊಸತೊಂದು ಗರಿ ಮೂಡಿಸಿದ್ದಾರೆ.
ಮೂಲತ: ಚೆಂಬೆಬೆಳ್ಳೂರಿನವರಾದ ಕೊಳುವಂಡ ದಿ. ನಂಜಪ್ಪ ಹಾಗೂ ಅನು ನಂಜಪ್ಪ ದಂಪತಿಯ ಪುತ್ರಿ ಪುಣ್ಯನಂಜಪ್ಪ ಈ ಸಾಧನೆ ಮಾಡಿರುವ ವೀರ ವನಿತೆಯಾಗಿದ್ದಾಳೆ. ಅಗತ್ಯ ಪರಿಶ್ರಮದ ಮೂಲಕ ಈ ಹಿಂದೆ ಇಂಡಿಯನ್ ಏರ್‍ಫೋರ್ಸ್ ಟ್ರೈನಿಂಗ್ ಅಕಾಡೆಮಿಗೆ ಸೇರ್ಪಡೆಗೊಂಡ ಪುಣ್ಯ ಪ್ರಾಥಮಿಕ ಹಂತದ ತರಬೇತಿಯ ಬಳಿಕ ಇಂದು ಫೈಟರ್ ಪೈಲೆಟ್ ಆಗಿ ವೈವಿಧ್ಯಮಯವಾದ, ರೋಚಕತೆಯ ಕ್ಲಿಷ್ಟಕರವಾದ ಹೆಚ್ಚಿನ ತರಬೇತಿ ಹೊಂದಲು ಹೈದರಾಬಾದ್‍ನ ಹಕ್ಕಿನಪೇಟೆ ತರಬೇತಿ ಕೇಂದ್ರಕ್ಕೆ ಸೇರ್ಪಡೆಗೊಂಡಿದ್ದು, ಮುಂದಿನ ಡಿಸೆಂಬರ್‍ನಲ್ಲಿ ಕಮೀಷನ್ಡ್ ಅಧಿಕಾರಿಯಾಗಿ ಹೊರಹೊಮ್ಮಲಿದ್ದಾರೆ.
2018ರಿಂದ 2019ರವರೆಗೆ ವಿವಿಧ ಹಂತದ ಪರೀಕ್ಷೆಗಳ ಬಳಿಕ 2019ರ ಜೂನ್‍ನಲ್ಲಿ ಮೆರಿಟ್ ವಿದ್ಯಾರ್ಥಿಯಾಗಿ ಇಂಡಿಯಾನ್ ಏರ್‍ಫೋರ್ಸ್ ಅಕಾಡೆಮಿ ದುಂಡಿಗಲ್ ಹೈದಾರಾಬಾದ್‍ಗೆ ಸೇರ್ಪಡೆಯಾಗಿದ್ದರು. ಇದೀಗ ಹಕ್ಕಿನಪೇಟೆ ತರಬೇತಿ ಕೇಂದ್ರದಲ್ಲಿ ಫೈಟರ್ ಪೈಲೆಟ್ ಆಗಿ ಕಾರ್ಯನಿರ್ವಹಿಸುವಂತಹ ಹೆಚ್ಚಿನ ಕಾರ್ಯಕ್ಷಮತೆಯ ತರಬೇತಿಯನ್ನು ಇವರು ಪಡೆಯಲಿದ್ದಾರೆ.