ಸಂಕಷ್ಟದ ಪರಿಸ್ಥಿತಿಯಲ್ಲಿ ತೈಲೋತ್ಪನ್ನಗಳ ಬೆಲೆ ಏರಿಕೆ ಅನಿವಾರ್ಯ : ಪ್ರತಾಪ್ ಸಿಂಹ ಸಮರ್ಥನೆ

30/06/2020

ಮಡಿಕೇರಿ ಜೂ.30 : ವಿವಿಧ ಆದಾಯ ಮೂಲದ ಆಧಾರದಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳು ಇಂದು ಕೊರೋನಾ ಸೋಂಕಿನಿಂದಾಗಿ ಕುಂಟಿತ ಗೊಂಡಿದ್ದು, ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಲು ತೈಲೋತ್ಪನ್ನಗಳ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಸಮರ್ಥಿಸಿಕೊಂಡಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ವ್ಯಾಪಿ ಹರಡಿರುವ ಕೊರೋನಾ ವೈರಸ್‍ನಿಂದಾಗಿ ದೇಶದಲ್ಲಿ ಕೈಗಾರಿಕಾ ಉತ್ಪನ್ನ ಸ್ಥಗಿತಗೊಂಡಿದೆ. ಜನರಿಗೆ ಸೂಕ್ತ ಚಿಕಿತ್ಸೆ, ಕಿಟ್ ಮತ್ತು ಆಹಾರ ವಿತರಣೆಗೆ ಅಧಿಕ ವೆಚ್ಚವಾಗುತ್ತಿದೆ. ಇದರಿಂದ ಸರ್ಕಾರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಆದಾಯದ ಮೂಲಗಳೇ ಇಲ್ಲದಂತಾಗಿದೆ.
ಆದ್ದರಿಂದ ಸರ್ಕಾರ ತೈಲ ಬೆಲೆಯ ಆದಾಯವನ್ನು ಅವಲಂಬಿಸಿಕೊಂಡಿದೆ ಎಂದು ಸ್ಪಷ್ಟಪಡಿಸಿದರು.
ಕೊರೋನಾ ಸೋಂಕಿನಿಂದಾಗಿ ಖರ್ಚು ಜಾಸ್ತಿ, ಆದಾಯ ಕಡಿಮೆಯಾಗಿದೆ. ಇವುಗಳ ಬಗ್ಗೆÀ ಅರಿವಿಲ್ಲದೆ ಮಾಜಿ ಸಿಎಂ ಸಿದ್ದಾರಾಮಯ್ಯ ಅವರು ಟೀಕಿಸುತ್ತಿದ್ದಾರೆ. ಪೆಟ್ರೋಲ್, ಡಿಸೇಲ್ ಬೆಲೆಯನ್ನು 25 ರಿಂದ 30ಕ್ಕೆ ಇಳಿಸುವಂತೆ ಒತ್ತಾಯಿಸುತ್ತಿದ್ದು, ಇದು ಅವರ ಜ್ಞಾನದ ಪರಿದಿಯನ್ನು ತೋರಿಸಿಕೊಟ್ಟಿದೆ ಎಂದು ಪ್ರತಾಪ್ ಸಿಂಹ ಕಿಡಿ ಕಾರಿದರು.