ಇದು ಹಲಸಿನ ಸಂತೆಯಲ್ಲ, ಆನೆಗಳದ್ದೇ ಚಿಂತೆ : ಅಭ್ಯತ್ ಮಂಗಲದಲ್ಲಿ ಆತಂಕ

30/06/2020

*ಸಿದ್ದಾಪುರ ಜೂ.30 : (((ಅಂಚೆಮನೆ ಸುಧಿ))) “ಹಲಸಿನ ಮರಗಳನ್ನು ಬೆಳೆದು ಕಾಡಾನೆಗಳಿಗೆ ಅಂಜಿದೊಡೆ ಎಂತಯ್ಯಾ” ಎನ್ನುವ ಪರಿಸ್ಥಿತಿ ಕೊಡಗಿನ ಬೆಳೆಗಾರರದ್ದಾಗಿದೆ. ಪ್ರಕೃತಿಯ ಆರಾಧಕರಾದ ಜಿಲ್ಲೆಯ ಬೆಳೆಗಾರರ ಪ್ರತಿ ತೋಟದಲ್ಲಿಯೂ ಹಲಸಿನ ಮರಗಳಿವೆ. ಆದರೆ ಈ ಮರಗಳೇ ಈಗ ಬೆಳೆಗಾರರಿಗೆ ಮಾರಕವಾಗಿ ಪರಿಣಮಿಸಿದೆ.
ಹಸಿರ ಪರಿಸರದಲ್ಲಿರುವ ಹಲಸಿನ ಮರಗಳು ಈ ಬಾರಿ ಅಗತ್ಯಕ್ಕಿಂತ ಹೆಚ್ಚೇ ಫಸಲನ್ನು ನೀಡಿವೆ. ಅರಣ್ಯ ಭಾಗದಲ್ಲಿ ಆಹಾರದ ಹಣ್ಣುಗಳ ಕೊರತೆಯನ್ನು ಎದುರಿಸುತ್ತಿರುವ ಕಾಡಾನೆಗಳು ಹಲಸಿನ ಹಣ್ಣಿನ ಮೇಲಿನ ಆಸೆಗಾಗಿ ಹಿಂಡು ಹಿಂಡಾಗಿ ನಾಡಿಗೆ ಲಗ್ಗೆ ಇಡುತ್ತಿವೆ. ನಿತ್ಯ ತೋಟಗಳಲ್ಲೇ ಸಂಚರಿಸುತ್ತಿರುವ ಆನೆಗಳ ಹಿಂಡು ಹೊಟ್ಟೆ ಬಿರಿಯುವಷ್ಟು ಹಲಸಿನ ಹಣ್ಣುಗಳನ್ನು ತಿಂದು ತೇಗುತ್ತಿವೆ. ಹೀಗೆ ಹಲಸನ್ನು ತಿನ್ನುವ ಭರದಲ್ಲಿ ಅಕ್ಕಪಕ್ಕದಲ್ಲಿರುವ ಕಾಫಿ ಗಿಡ ಮತ್ತು ಕರಿಮೆಣಸಿನ ಬಳ್ಳಿಗಳನ್ನು ನಾಶ ಮಾಡುತ್ತಿವೆ.
ಹಲಸಿನ ಹಣ್ಣು ಸೊಂಡಿಲಿಗೆ ಸಿಗದೆ ಇದ್ದಾಗ ಮರವನ್ನೇ ಅಲುಗಾಡಿಸಿ ಹಣ್ಣುಗಳನ್ನು ಬೀಳಿಸಿ ತಿನ್ನುತ್ತಿವೆ. ಇದರಿಂದ ಗಿಡಗಳಿಗೆ ಮತ್ತಷ್ಟು ಹಾನಿಯಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇರುವ ಕಾಡಾನೆಗಳು ಮರಿಗಳೊಂದಿಗೆ ತೋಟಗಳಲ್ಲೇ ಬೀಡು ಬಿಡುತ್ತಿವೆ.
ಪ್ರಸ್ತುತ ವರ್ಷ ಅಭ್ಯತ್ ಮಂಗಲ ಗ್ರಾಮದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ಹಲಸಿನ ಹಣ್ಣಿಗಾಗಿ ಮುಗಿ ಬೀಳುತ್ತಿವೆ. ವನ್ಯಜೀವಿಗಳ ಉಪಟಳದಿಂದ ಗ್ರೀನ್ ಫೀಲ್ಡ್ ಎಸ್ಟೇಟ್ ಗೆ ಹೆಚ್ಚು ಹಾನಿಯಾಗಿದ್ದು, ಬೇಸತ್ತ ಮಾಲೀಕರು ಹಲಸಿನ ಹಣ್ಣುಗಳನ್ನೇ ಇಲ್ಲದಂತೆ ಮಾಡಿದ್ದಾರೆ. ಮರಗಳಲ್ಲಿದ್ದ ಸಾವಿರಾರು ಫಸಲನ್ನು ಕಾರ್ಮಿಕರಿಂದ ಕೀಳಿಸಿ ಟ್ರಾಕ್ಟರ್ ಮೂಲಕ ಸಾಗಿಸಿ ದೂರದ ಪ್ರದೇಶದಲ್ಲಿ ಬಿಸಾಕಿದ್ದಾರೆ. ರಾಶಿ ರಾಶಿಯಾಗಿ ಬಿದ್ದಿದ್ದ ಹಲಸಿನ ಕಾಯಿ ಮತ್ತು ಹಣ್ಣು ಕಾಡಾನೆ ದಾಳಿಯಿಂದ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ ತೋಟದ ಮಾಲೀಕರ ಅಸಹಾಯಕತೆಗೆ ಸಾಕ್ಷಿ ಹೇಳುತ್ತಿತ್ತು. ಗ್ರೀನ್ ಫೀಲ್ಡ್ ಎಸ್ಟೇಟ್ ಮಾತ್ರವಲ್ಲದೆ ಅಕ್ಕಪಕ್ಕದ ಎಲ್ಲಾ ತೋಟಗಳು ಆನೆ ದಾಳಿಗೆ ತುತ್ತಾಗಿವೆ. ಕೆಲವು ಬೆಳೆಗಾರರು ಕೈಚೆಲ್ಲಿ ಕುಳಿತ್ತಿದ್ದು, ಮುಂದೆ ಹೇಗೆ ತೋಟ ನಿರ್ವಹಣೆ ಮಾಡುವುದು ಎನ್ನುವ ಚಿಂತೆಯಲ್ಲಿ ಮುಳುಗಿದ್ದಾರೆ. ಅರಣ್ಯ ಇಲಾಖೆಯ ಎಲ್ಲಾ ಪ್ರಯತ್ನಗಳು ವಿಫಲವಾಗುತ್ತಿದ್ದು, ವನ್ಯಜೀವಿಗಳ ದಾಳಿಯನ್ನು ಶಾಶ್ವತವಾಗಿ ತಡೆಯುವ ಯೋಜನೆಯನ್ನು ಸರ್ಕಾರ ರೂಪಿಸಬೇಕೆಂದು ಬೆಳೆಗಾರರು ಒತ್ತಾಯಿಸಿದ್ದಾರೆ.