ಗೋಮಾಳ ರಕ್ಷಕ ಕೀತಿಯಂಡ ಸಿ. ಸುಬ್ಬಯ್ಯ ಅವರಿಗೆ ಹಿಂದು ಜಾಗರಣ ವೇದಿಕೆ ಅಶ್ರುತರ್ಪಣ

30/06/2020

ಮಡಿಕೇರಿ ಜೂ.30 : ಕೊಡಗು ಜಿಲ್ಲೆ ವೀರಾಜಪೇಟೆ ತಾಲ್ಲೂಕಿನ ಬೇಟೋಳಿ – ಆರ್ಜಿ ಗ್ರಾಮ ಪರಿಸರದ ವಿಶಾಲವಾದ ಗೋಮಾಳ ಭೂಮಿಯನ್ನು   ಗ್ರಾಮೀಣ ಭಾಗದ ಗೋವುಗಳಿಗಾಗಿ ಸಂರಕ್ಷಿಸಲು ತಮ್ಮ ಜೀವನವನ್ನೇ ಮೀಸಲಿಟ್ಟ ಗೋ ಪ್ರೇಮಿ  ಕೀತಿಯಂಡ ಸಿ. ಸುಬ್ಬಯ್ಯ(86)ರವರಿಗೆ ಹಿಂದು ಜಾಗರಣ ವೇದಿಕೆ ಕೊಡಗು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ.  ನೂರಾರು ಎಕರೆ ವಿಶಾಲವಿರುವ ಗೋಮಾಳವನ್ನು  ಗ್ರಾಮೀಣ ಭಾಗದ ಗೋವುಗಳ ಮೇವಿಗಾಗಿ ಸಂರಕ್ಷಿಸಲು ಸುಧೀರ್ಘವಾಗಿ ಸಾರ್ವಜನಿಕ ಮತ್ತು ಕಾನೂನಾತ್ಮಕ ಸಂಘರ್ಷ ನಡೆಸಿದ ಧೀಮಂತ ನೈಜ ಗೋಪ್ರೇಮಿ ಕೀತಿಯಂಡ ಸಿ. ಸುಬ್ಬಯ್ಯ ಅವರು ಇಂದು ನಮ್ಮನ್ನು ಅಗಲಿದ್ದಾರೆ. ತನ್ನ ಗ್ರಾಮದ ಇನ್ನಿಬ್ಬರು ಹಿರಿಯರಾದ ಜಿ.ಕೆ.ರಾಮಯ್ಯ ಮತ್ತು ಬಿ.ಜಿ.ಪುರುಷೋತ್ತಮರೊಡಗೂಡಿ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ರೈತರ ಜೀವನಾಡಿ ಗೋವುಗಳಿಗೆ ಅಗತ್ಯವಾದ ಮೇವನ್ನು ಉಣಿಸುವ ನೂರಾರು ಎಕರೆ ವಿಸ್ತಾರದ ಫಲವತ್ತಾದ ಗೋಮಾಳವನ್ನು ಕಬಳಿಸಲು ಪಟ್ಟಭದ್ರ ಪ್ರಭಾವಿ ಹಿತಾಶಕ್ತಿಗಳು ನಿರಂತರ ಪ್ರಯತ್ನ ನಡೆಸುತ್ತಿದ್ದಾಗಲೂ ಅದನ್ನೆದುರಿಸಿ ಆ ಗೋಮಾಳದ ರಕ್ಷಣೆಗಾಗಿ ಸುಬ್ಬಯ್ಯನವರು  ಶತಪ್ರಯತ್ನ ನಡೆಸಿದರು ಎಂದು ಜಾಗರಣ ವೇದಿಕೆ ಹೇಳಿದೆ.

ತಮ್ಮ 86 ರ ಇಳಿ ವಯಸ್ಸಿನಲ್ಲೂ ಕೊನೇ ಉಸಿರಿನವರೆಗೂ ಯಾವುದೇ ಒತ್ತಡ, ಪ್ರಭಾವ   ತಿರಸ್ಕಾರಗಳನ್ನು ಲೆಕ್ಕಿಸದೇ ಗೋಮಾಳದ ರಕ್ಷಣೆಗಾಗಿ ಇಡೀ ರಾಜ್ಯಕ್ಕೆ ಮೇಲ್ಪಂಕ್ತಿಯನ್ನು ಹಾಕಿಕೊಟ್ಟ  ಆದರ್ಶ ಸಾಮಾಜಿಕ ಸೇವಕ  ಸುಬ್ಬಯ್ಯ ಅವರ ನಿಧನ ದು:ಖ ತಂದಿದೆ ಎಂದು ಪ್ರಮುಖರು ತಿಳಿಸಿದ್ದಾರೆ.