ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 54ಕ್ಕೆ ಏರಿಕೆ

01/07/2020

ಮಡಿಕೇರಿ ಜು. 1 : ಕೊಡಗು ಜಿಲ್ಲೆಯಲ್ಲಿ  ಬುಧವಾರ ಕೊರೋನಾ ಸೋಂಕಿನ 7 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಅರ್ಧ ಶತಕವನ್ನು ಮೀರಿಸಿದೆ. 
ವೀರಾಜಪೇಟೆ ತಾಲೂಕಿನ ಹುಂಡಿ ಗ್ರಾಮವೊಂದರಲ್ಲೇ 11 ವರ್ಷದ ಬಾಲಕ ಸೇರಿದಂತೆ 5 ಮಂದಿಗೆ ಸೋಂಕು ತಗುಲಿದ್ದು, ತಿತಿಮತಿ ಹಾಗೂ ಶನಿವಾರಸಂತೆಯಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ.ನೆಲ್ಲಿಹುದಿಕೇರಿಯ ಸೋಂಕಿತ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದಹುಂಡಿ  ಗ್ರಾಮದ 61 ವರ್ಷ, 43 ವರ್ಷ,29 ವರ್ಷದ ವ್ಯಕ್ತಿಗಳಲ್ಲಿ ಹಾಗೂ 11 ವರ್ಷದ ಬಾಲಕನಲ್ಲಿ  ಸೋಂಕು ದೃಢಪಟ್ಟಿದೆ.ಮತ್ತೊಂದೆಡೆ ಶನಿವಾರ ಸಂತೆಯ ಗುಂಡೂರಾವ್ ಬಡಾವಣೆಯ 47 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು. ಈತ ಶಿರಂಗಾಲದ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದರೆನ್ನಲಾಗಿದೆ.ವೀರಾಜಪೇಟೆ ತಾಲೂಕಿನ ತಿತಿಮತಿ ಗ್ರಾಮದ 65 ವರ್ಷದ ವ್ಯಕ್ತಿಯಲ್ಲೂ ಸೋಂಕು ದೃಢಪಟ್ಟಿದ್ದು, ತಿತಿಮತಿ ಗ್ರಾಮದಲ್ಲಿ ನಿರ್ಬಂಧಿತ ಪ್ರದೇಶ ಘೋಷಿಸಲಾಗಿದೆ. ಹುಂಡಿ ಹಾಗೂ ಶನಿವಾರಸಂತೆ ಗುಂಡೂರಾವ್ ಬಡಾವಣೆಯಲ್ಲಿ ಈಗಾಗಲೇ ಘೋಷಿಸಲಾಗಿರುವ ಸೀಲ್ ಡೌನ್ ಪ್ರದೇಶದ ವ್ಯಾಪ್ತಿಯಲ್ಲಿ ಹಾಲಿ ಸೋಂಕಿತರ ನಿವಾಸಗಳು ಇರುವುದರಿಂದ ಹೊಸದಾಗಿ ನಿರ್ಬಂಧಿತ ಪ್ರದೇಶ ಘೋಷಿಸಲಾಗಿಲ್ಲ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಪ್ರಸಕ್ತ ಸೋಂಕಿತರ ಸಂಖ್ಯೆ  54ಕ್ಕೆ ಏರಿಕೆಯಾಗಿದ್ದು, 51 ಪ್ರಕರಣಗಳು ಸಕ್ರಿಯವಾಗಿವೆ. ಮೂರು ಮಂದಿ ಗುಣಮುಖರಾಗಿದ್ದು,ಸೀಲ್ ಡೌನ್ ಪ್ರದೇಶವೂ  23ಕ್ಕೆ ಏರಿಕೆಯಾಗಿದೆ.