ನವೆಂಬರ್ ಅಂತ್ಯದವರೆಗೆ ಉಚಿತ ಪಡಿತರ

July 1, 2020

ನವದೆಹಲಿ ಜೂ.1 : ಬಡವರಿಗೆ ಉಚಿತ ಪಡಿತರ ನೀಡುವ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ನವೆಂಬರ್ ಅಂತ್ಯದವರೆಗೂ ವಿಸ್ತರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಘೋಷಿಸಿದ್ದಾರೆ.
ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಕೊರೋನಾ ಲಾಕ್ ಡೌನ್ ನಿಂದಾಗಿ ದೇಶದಲ್ಲಿ ಬಡವರು ತೀವ್ರ ಸಂಕಷ್ಟಕ್ಕೆ ಸಿಲುಕಿರುವುದರಿಂದ ‘ಪ್ರಧಾನಮಂತ್ರಿ ಗರೀಬ್‍ಕಲ್ಯಾಣ ಅನ್ನ’ ಯೋಜನೆಯನ್ನು ದೀಪಾವಳಿಯಿಂದ ಆಯುಧಪೂಜೆಯವರೆಗೆ ಅಂದರೆ, ನವೆಂಬರ್ ಅಂತ್ಯದವರೆಗೆ ವಿಸ್ತರಿಸುವುದಾಗಿ ಮೋದಿ ಪ್ರಕಟಿಸಿದರು.
ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿ ಬಡವರಿಗೆ 5 ಕೆಜಿ ಅಕ್ಕಿ ಅಥವಾ ಗೋಧಿ ಮತ್ತು ಒಂದು ಕೆ.ಜಿ. ಬೇಳೆಯನ್ನು ಉಚಿತವಾಗಿ ನೀಡಲಾಗುತ್ತದೆ. ದೇಶದ 80 ಕೋಟಿ ಜನರಿಗೆ ಇದರ ಲಾಭವಾಗಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಕೊರೋನಾ ವೈರಸ್ ಸೋಂಕನ್ನು ಜನರು ಹಗುರವಾಗಿ ತೆಗೆದುಕೊಳ್ಳಬಾರದು. ಅನ್‍ಲಾಕ್ ಘೋಷಣೆ ಆದ ಬಳಿಕ ಜನರು ವೈಯಕ್ತಿಕವಾಗಿ ಬಹಳ ನಿರ್ಲಕ್ಷ್ಯ ವಹಿಸುತ್ತಿರುವುದನ್ನು ಗಮನಿಸಿದ್ದೇನೆ. ಇಂಥ ಧೋರಣೆ ತರವಲ್ಲ. ಜನರು ಕೊರೋನಾ ವೈರಸ್ ಅನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ದೇಶದಲ್ಲಿ ಲಾಕ್‍ಡೌನ್‍ಪರಿಣಾಮಗಳನ್ನು ಜನರು ಎದುರಿಸುತ್ತಿದ್ದಾರೆ. ಜೊತೆಗೆ, ಮಳೆಗಾಲ ಆರಂಭವಾಗುತ್ತಿದೆ. ಈಗ ಮುಖ್ಯವಾಗಿ ಕೃಷಿ ಕ್ಷೇತ್ರದಲ್ಲಿ ಹೆಚ್ಚು ಕೆಲಸವಿರುತ್ತದೆ. ಇತರ ಕ್ಷೇತ್ರಗಳಲ್ಲಿ ಸ್ವಲ್ಪ ವಿರಾಮವಿರುತ್ತದೆ. ಅಲ್ಲದೆ, ನಿಧಾನವಾಗಿ ಹಬ್ಬದ ವಾತಾವರಣವೂ ರಂಗೇರುತ್ತಿದೆ. ಜುಲೈ 15ಕ್ಕೆ ಗುರುಪೂರ್ಣಿಮೆ ಬರುತ್ತಿದೆ. ಅದರ ನಂತರ ಶ್ರಾವಣ, ಕೃಷ್ಣ ಜನ್ಮಾಷ್ಟಮಿ, ಆ.15, ರಾಖಿ ಹಬ್ಬ, ದಸರಾ ದೀಪಾವಳಿಯಂತಹ ಸಾಲು ಸಾಲು ಹಬ್ಬಗಳು ಬರುತ್ತಿವೆ. ಈ ಸಂದರ್ಭದಲ್ಲಿ ಅಗತ್ಯಗಳು ಮತ್ತು ಖರ್ಚುಗಳು ಹೆಚ್ಚಾಗುತ್ತವೆ. ಆದ್ದರಿಂದ ದೇಶದ 80 ಕೋಟಿ ಜನರಿಗೆ ಉಚಿತ ರೇಷನ್ ನೀಡುವ ಯೋಜನೆ ನವೆಂಬರ್‍ವರೆಗೆ ಮುಂದುವರಿಯಲಿದೆ. ಇದಕ್ಕಾಗಿ 90 ಸಾವಿರ ಕೋಟಿಗಿಂತ ಹೆಚ್ಚು ಖರ್ಚಾಗಲಿದೆ ಎಂದರು.

error: Content is protected !!