ಕುರಿ, ಮೇಕೆಗಳಿಗೂ ಸೋಂಕು ಪರೀಕ್ಷೆ

01/07/2020

ತುಮಕೂರು ಜೂ.30 : ತುಮಕೂರು ಜಿಲ್ಲೆಯಲ್ಲಿ ಕುರಿ ಮೇಯಿಸುತ್ತಿದ್ದ ವ್ಯಕ್ತಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆತ ಮೇಯಿಸುತ್ತಿದ್ದ 50ಕ್ಕೂ ಹೆಚ್ಚು ಕುರಿ ಹಾಗೂ ಮೇಕೆಗಳನ್ನೂ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ.
ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗೊಲ್ಲರಹಟ್ಟಿ ಗ್ರಾಮದ ಕುರಿ ಮೇಯಿಸುತ್ತಿದ್ದ ವ್ಯಕ್ತಿಗೆ ಕೊರೋನಾ ದೃಢಪಟ್ಟಿದೆ. ಹಾಗಾಗಿ ಆತನ 50 ಕುರಿಗಳನ್ನು ಪ್ರತ್ಯೇಕವಾಗಿರಿಸಿ ಅವುಗಳ ಗಂಟಲು ದ್ರವ ಮತ್ತು ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಅದನ್ನು ಮಧ್ಯ ಪ್ರದೇಶದ ಭೂಪಾಲ್ ನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಿ ತಪಾಸಣೆ ಮಾಡಿಸಲು ನಿರ್ಧರಿಸಲಾಗಿದೆ.
ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಕೆ ಜಿ ನಂದೀಶ್ ನೇತೃತ್ವದಲ್ಲಿ ತಜ್ಞರಾದ ಡಾ.ಪ್ರವೀಣ್ ಮತ್ತು ಮಂಜುನಾಥ್ ಅವರು ಪಿಪಿಇ ಕಿಟ್ ಧರಿಸಿ ಕುರಿಗಳ ಗಂಟಲು ದ್ರವ ಸಂಗ್ರಹಿಸಿದರು.
10ರಿಂದ 15 ದಿನಗಳಲ್ಲಿ ಕುರಿಗಳ ಕೊವಿಡ್-19 ವರದಿ ಬರಲಿದ್ದು, ಅಲ್ಲಿಯವರಿಗೆ ಈ ಕುರಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.