ವಿದೇಶದಿಂದ ಮರಳಿದವರಿಗೆ ಸಾಂಸ್ಥಿಕ ಸಂಪರ್ಕ ತಡೆ ಕಡ್ಡಾಯ : ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ

ಮಡಿಕೇರಿ ಜು. 1 : ಸರ್ಕಾರದ ಇತ್ತೀಚಿನ ನಿರ್ದೇಶನಗಳ ಪ್ರಕಾರ, ಮಹಾರಾಷ್ಟ್ರ ಮತ್ತು ವಿದೇಶದಿಂದ ಮರಳಿದವರು ಕಡ್ಡಾಯವಾಗಿ 7 ದಿನಗಳ ಸಾಂಸ್ಥಿಕ ಸಂಪರ್ಕ ತಡೆಯಲ್ಲಿ ಮತ್ತು ನಂತರದ 7 ದಿನಗಳ ಗೃಹ ಸಂಪರ್ಕ ತಡೆಯಲ್ಲಿ ಇರಬೇಕಾಗಿದೆ. ಇತರೆ ರಾಜ್ಯಗಳಿಂದ ಮರಳಿದವರು 14 ದಿನಗಳ ಕಾಲ ಗೃಹ ಸಂಪರ್ಕ ತಡೆಯಲ್ಲಿರಬೇಕಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಈ ರೀತಿ ಮರಳಿದವರ ಪೈಕಿ ಅನೇಕ ಜವಾಬ್ದಾರಿಯುತ ವ್ಯಕ್ತಿಗಳು ನೇರವಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆ / ಸ್ಥಳೀಯ ಗ್ರಾಮ ಪಂಚಾಯತ್ / ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರದ ಮುಂದೆ ವರದಿ ಮಾಡುಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಅವರು ಮಾಡಿದ ಪ್ರಯತ್ನಗಳಿಗೆ ಜಿಲ್ಲಾಡಳಿತವು ಪ್ರಾಮಾಣಿಕ ಧನ್ಯವಾದಗಳನ್ನು ಅರ್ಪಿಸುತ್ತದೆ.
ಆದಾಗ್ಯೂ, ಇವರುಗಳ ಪೈಕಿ ಕೆಲವರು ಜಿಲ್ಲೆಗೆ ಪ್ರವೇಶಿಸಿದಲ್ಲದೆ, ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಾ, ತಪ್ಪಿಸಿಕೊಳ್ಳಲು ಯತ್ನಿಸಿರುತ್ತಾರೆ. ನಂತರದ ದಿನಗಳಲ್ಲಿ ಇವರಲ್ಲಿ ಸೋಂಕು ದೃಢಪಟ್ಟ ಕಾರಣ ಇವರುಗಳಿದ್ದ ಪ್ರದೇಶವನ್ನು ಕಂಟೈನ್ಮೆಂಟ್ ವಲಯಗಳಾಗಿ ಪರಿವರ್ತಿಸಲಾಗಿದ್ದು, ನೆರೆ ಹೊರೆಯವರಿಗೆ ಸಹ ತೊಂದರೆ ಉಂಟಾಗಿರುತ್ತದೆ. ಜಿಲ್ಲಾಡಳಿತ ಅಂತಹ ಪ್ರಕರಣಗಳನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತದೆ. ಈ ರೀತಿ ಸರ್ಕಾರದ ನಿರ್ದೇಶನ ಮಾರ್ಗಸೂಚಿಗಳಿಗೆ ವಿರುದ್ದವಾಗಿ ವರ್ತಿಸಿರುವ ವ್ಯಕ್ತಿಗಳ ವಿರುದ್ದ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.
ಆದ್ದರಿಂದ ಸರ್ಕಾರದ ನಿರ್ದೇಶನಗಳಂತೆ ಮಹಾರಾಷ್ಟ್ರ ಮತ್ತು ವಿದೇಶದಿಂದ ಮರಳಿದವರು ಕಡ್ಡಾಯವಾಗಿ 7 ದಿನಗಳ ಸಾಂಸ್ಥಿಕ ಸಂಪರ್ಕ ತಡೆ ಮತ್ತು ನಂತರದ 7 ದಿನಗಳ ಗೃಹ ಸಂಪರ್ಕ ತಡೆಯಲ್ಲಿರದೆ ಹಾಗೂ ಇತರೆ ರಾಜ್ಯಗಳಿಂದ ಆಗಮಿಸಿದವರು 14 ದಿನಗಳ ಗೃಹ ಸಂಪರ್ಕ ತಡೆಯಲ್ಲಿರದೆ, ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಅಥವಾ ಅವರುಗಳು ಆಗಮಿಸಿದ ವಿಚಾರವನ್ನು ಮರೆಮಾಚುತ್ತಿರುವ ಪ್ರಕರಣಗಳು ನೀವು ವಾಸಿಸುವ ಪ್ರದೇಶದಲ್ಲಿ ಕಂಡುಬಂದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರನ್ನು ಕೋರಲಾಗಿದೆ.
