ತೋಟದ ಮನೆ, ಕಚೇರಿಗಳ ಸುತ್ತ ಬೀಡುಬಿಟ್ಟ ಕಾಡಾನೆಗಳ ಹಿಂಡು

01/07/2020

ಮಡಿಕೇರಿ ಜು.1 : ಇಲ್ಲಿಯವರೆಗೆ ತೋಟಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿದ್ದ ಕಾಡಾನೆಗಳು ಈಗ ಮನೆಯಂಗಳಕ್ಕೆ ಬರಲು ಆರಂಭಿಸಿವೆ. ಕಾಡಾನೆಗಳ ಕಾಟದಿಂದ ಬೇಸತ್ತ ಅಭ್ಯತ್ ಮಂಗಲ ಗ್ರಾಮದ ಗ್ರೀನ್ ಫೀಲ್ಡ್ ಎಸ್ಟೇಟ್‍ನ ಮಾಲೀಕರು ತೋಟದಲ್ಲಿದ್ದ ಹಲಸಿನ ಫಸಲನ್ನು ಸಂಪೂರ್ಣವಾಗಿ ಕಿತ್ತು ಬಿಸಾಕಿದ ಬೆನ್ನಲ್ಲೇ ವನ್ಯಜೀವಿಗಳ ಹಿಂಡು ತೋಟದ ಮನೆ ಮತ್ತು ಕಚೇರಿ ಎದುರು ಬೀಡು ಬಿಟ್ಟು ಆತಂಕ ಸೃಷ್ಟಿಸಿದೆ.
ಕಳೆದ ಎರಡು ದಿನಗಳಿಂದ ಎಸ್ಟೇಟ್‍ನ ಬಿ.ವಿಭಾಗದ ಕುರಿಯನ್ ಜೋಸ್ ಎಂಬುವವರಿಗೆ ಸೇರಿದ ಮನೆ ಹಾಗೂ ಕಚೇರಿ ಎದುರಿನಲ್ಲೇ ಸುಮಾರು ಏಳು ಆನೆಗಳು ಓಡಾಡುತ್ತಿವೆ. ಇಂದು ಮನೆಯ ಎದುರಿನಲ್ಲಿದ್ದ ಕೃಷಿ ಪರಿಕರ, ಔಷಧಿ ಸಿಂಪಡಣೆಯ ಯಂತ್ರ, ನೀರಿನ ಟ್ಯಾಂಕ್, ಹೂವಿನ ಕುಂಡ ಮತ್ತಿತರ ವಸ್ತುಗಳನ್ನು ಸಂಪೂರ್ಣವಾಗಿ ಜಖಂಗೊಳಿಸಿವೆ.
ಸ್ಥಳಕ್ಕೆ ವನಪಾಲಕ ಕೂಡಕಂಡಿ ಸುಬ್ರಾಯ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪಟಾಕಿಗಳನ್ನು ಸಿಡಿಸಿ ಕಾಡಾನೆಗಳನ್ನು ಓಡಿಸುವ ಪ್ರಯತ್ನ ಮಾಡಿದರು. ಸದ್ಯಕ್ಕೆ ಆನೆಗಳು ಕಾಲ್ಕಿತ್ತಿವೆಯಾದರೂ ಮತ್ತೆ ಪ್ರತ್ಯಕ್ಷವಾಗುವ ಆತಂಕ ಮನೆ ಮಾಡಿದೆ. ಕಾರ್ಮಿಕರು ತೋಟದಲ್ಲಿ ಕೆಲಸ ಮಾಡುವುದೇ ಕಷ್ಟವಾಗಿದ್ದು, ಅರಣ್ಯ ಇಲಾಖೆ ಶಾಶ್ವತ ಪರಿಹಾರವನ್ನು ಸೂಚಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮತ್ತೊಂದೆಡೆ ನೆಲ್ಯಹುದಿಕೇರಿಯ ಚೇಂದಂಡ ಮಾಚಮ್ಮ ಅವರ ಪುತ್ರ ಪೊನ್ನಪ್ಪ ಅವರ ಮನೆ ಬಾಗಿಲಿಗೆ ಬಂದ ಆನೆಗಳು ಹೂಕುಂಡಗಳನ್ನು ಪುಡಿಗಟ್ಟಿವೆ. ತೆಂಗಿನ ಮರಗಳಿಗೆ ಕೂಡ ಹಾನಿಯುಂಟು ಮಾಡುವುದರೊಂದಿಗೆ ಮನೆಯವರಲ್ಲಿ ಆತಂಕ ಮೂಡಿಸಿವೆ. ಸ್ಥಳಕ್ಕೆ ವನಪಾಲಕ ಕೂಡಕಂಡಿ ಸುಬ್ರಾಯ ಭೇಟಿ ನೀಡಿ ಪರಿಶೀಲಿಸಿದರು. ಭಯಗೊಂಡಿರುವ ಗ್ರಾಮಸ್ಥರು ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ.