ಕೋಟೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಅಧಿಕಾರಿಗಳ ತಂಡ

01/07/2020

ಮಡಿಕೇರಿ ಜು.01 : ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳ ತಂಡವು ಬುಧವಾರ ನಗರದ ಕೋಟೆಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿದರು.
ತಂಡದಲ್ಲಿ ಚಂದ್ರಕಾಂತ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಮದನ್ ಮೋಹನ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶಿವರಾಮ್, ಮಾಹಿತಿ ಹಕ್ಕು ಆಯೋಗದ ನಿವೃತ್ತ ಆಯುಕ್ತರಾದ ವಿರೂಪಾಕ್ಷಯ್ಯ, ಜಿ.ಪಂ.ಮಾಜಿ ಅಧ್ಯಕ್ಷರಾದ ಎಚ್.ಎಸ್.ಅಶೋಕ್ ಇತರರು ಇದ್ದರು.
ವೀಕ್ಷಣೆ ಬಳಿಕ ಮಾತನಾಡಿದ ರಾಜ್ಯ ಮಾಹಿತಿ ಆಯೋಗದ ನಿವೃತ್ತ ಆಯುಕ್ತರಾದ ವಿರೂಪಾಕ್ಷಯ್ಯ ಪ್ರಥಮ ಹಂತದಲ್ಲಿ 53 ಲಕ್ಷ ಹಣ ಬಿಡುಗಡೆಯಾಗಿದ್ದು, ರಾಜ್ಯ ಉಚ್ಛ ನ್ಯಾಯಾಲಯವು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಅವರೊಂದಿಗೆ ಕಾಮಗಾರಿಯ ಪ್ರಗತಿ ವೀಕ್ಷಣೆ ಮಾಡಿ ಆಗಸ್ಟ್, 08 ರಂದು ನ್ಯಾಯಾಲಯಕ್ಕೆ ವರದಿ ನೀಡಲು ತಿಳಿಸಿದ್ದು, ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ಕೋಟೆ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಹಾಗೂ ಕಾಮಗಾರಿಗೆ ಪುರಾತತ್ವ ಇಲಾಖೆಯು ವಿಧಿಸುತ್ತಿರುವ ಶೇ.10 ರಷ್ಟು ಸೇವಾ ಶುಲ್ಕವನ್ನು ರದ್ದುಗೊಳಿಸಬೇಕು. ಮೂರು ಜನರ ತಂಡವನ್ನು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ರಚನೆ ಮಾಡಿ ಕಾಮಗಾರಿಯ ಗುಣಮಟ್ಟವನ್ನು ಹಾಗೂ ಮೇಲುಸ್ತುವಾರಿಯನ್ನು ನಡೆಸುವಂತೆ ನ್ಯಾಯಾಲಯಕ್ಕೆ ವರದಿ ನೀಡಲಾಗುವುದು ಎಂದು ಅವರು ತಿಳಿಸಿದರು.
ಪ್ರಸ್ತುತ ಕೋಟೆ ಕಾವಲಿಗೆ ನ್ಯಾಯಾಲಯದ ನಿರ್ದೇಶನದಂತೆ 24 ಗಂಟೆಗಳ ಕಾವಲುಗಾರರ ವ್ಯವಸ್ಥೆಯಿದ್ದು, ಮೇಲ್ಛಾವಣಿಯ ತುರ್ತು ಕಾಮಗಾರಿಯನ್ನು ತ್ವರಿತವಾಗಿ ಮುಗಿಸಬೇಕು ಎಂದು ಪುರಾತತ್ವ ಸಂರಕ್ಷಣಾ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಸಲಹೆ ಮಾಡಿದರು.
ಕೋಟೆ ಪುನ:ಶ್ಚೇತನಕ್ಕೆ ಮತ್ತು ಅಭಿವೃದ್ಧಿಗೆ ರಾಜ್ಯ ಸರ್ಕಾರವು 8.5 ಕೋಟಿ ರೂ. ಗಳನ್ನು ಬಿಡುಗಡೆಗೊಳಿಸಿದ್ದು, ಇದನ್ನು ಬಳಸಿಕೊಂಡು ಕೋಟೆಯ ಮೂಲ ವಾಸ್ತುಶಿಲ್ಪದೊಂದಿಗೆ ನವೀಕರಣಗೊಳಿಸಿ ಪ್ರಮುಖ ಪ್ರೇಕ್ಷಣೀಯ ಸ್ಥಳವನ್ನಾಗಿ ರೂಪುಗೊಳಿಸಲು ಭಾರತೀಯ ಪುರಾತತ್ವ ಇಲಾಖೆಯು ಮುಂದಾಗಬೇಕು ಎಂದು ಅವರು ತಿಳಿಸಿದರು.
1920ರ ಆಗಿನ ಬ್ರಿಟೀಷ್ ಭಾರತ ಸರ್ಕಾರವು ಕೋಟೆಯನ್ನು ಸ್ಮಾರಕ ಎಂದು ಅಧಿಸೂಚನೆ ಹೊರಡಿಸಿದ್ದು, ಇದರ ಅನ್ವಯ ಭಾರತೀಯ ಪುರಾತತ್ವ ಇಲಾಖೆಗೆ ಕೋಟೆಯನ್ನು ಸಂಪೂರ್ಣವಾಗಿ ಸ್ವಾಧೀನ ಪಡಿಸಿಕೊಂಡು ಹೆಚ್ಚಿನ ಮುತುವರ್ಜಿ ವಹಿಸಿ ಸಂರಕ್ಷಿಸಬೇಕು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಭಾರತೀಯ ಪುರಾತತ್ವ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಚಂದ್ರಕಾಂತ್ ಅವರು ಪ್ರಸ್ತುತ ಕೋಟೆಯ ಮೇಲ್ಛಾವಣಿ ತಾತ್ಕಾಲಿಕ ದುರಸ್ತಿ ಕಾರ್ಯದ ಪ್ರಗತಿ ಕುರಿತು ಮಾಹಿತಿ ನೀಡಿ ಶೀಘ್ರದಲ್ಲಿಯೇ ಮೊದಲನೇ ಹಂತದಲ್ಲಿ ಬಿಡುಗಡೆಯಾಗಿರುವ 53 ಲಕ್ಷ ರೂ. ಮೊತ್ತದ ಮೇಲ್ಛಾವಣಿ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದರು.

ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಮದನ್ ಮೋಹನ್ ಅವರು ಕಾಮಗಾರಿಯ ಮೇಲುಸ್ತುವಾರಿ ಪ್ರಗತಿ ಕುರಿತು ಮಾಹಿತಿ ನೀಡಿದರು.