ಜಿಲ್ಲಾಡಳಿತದ ವಿರುದ್ಧ ಜೆಡಿಎಸ್ ಅಲ್ಪಸಂಖ್ಯಾತರ ಘಟಕ ಅಸಮಾಧಾನ

01/07/2020

ಮಡಿಕೇರಿ ಜು.1 : ಜಿಲ್ಲೆಯಲ್ಲಿ ಕೊರೋನಾ ಶಂಕಿತರು ಮತ್ತು ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರು, ಇದನ್ನು ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರ ವಿಫಲವಾಗುತ್ತಿದೆ. ಅಲ್ಲದೆ ಸಂಕಷ್ಟವನ್ನು ಎದುರಿಸುತ್ತಿರುವ ಸೀಲ್ ಡೌನ್ ನಿವಾಸಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಜಿಲ್ಲಾ ಜಾತ್ಯತೀತ ಜನತಾ ದಳದ ಅಲ್ಪಸಂಖ್ಯಾತರ ಘಟಕ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್, ಕೋವಿಡ್-19 ಸೋಂಕಿತರ ಬಗ್ಗೆ ಜಿಲ್ಲಾಡಳಿತವಾಗಲಿ, ಜನಪ್ರತಿನಿಧಿಗಳಾಗಲಿ ಯಾವುದೇ ಕಾಳಜಿ ತೋರುತ್ತಿಲ್ಲ. ಇದಕ್ಕೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿರುವ ಅವ್ಯವಸ್ಥೆಗಳೇ ಸಾಕ್ಷಿಯಾಗಿದೆ ಎಂದು ಟೀಕಿಸಿದರು.
ಆಸ್ಪತ್ರೆಗೆ ದಾಖಲಾದ ಕೋವಿಡ್ ಸೋಂಕಿತರಿಗೆ ಸೂಕ್ತ ಆಹಾರ, ಬಿಸಿ ನೀರು, ಮಾಸ್ಕ್, ಸ್ಯಾನಿಟೈಸರ್ ಮುಂತಾದ ಅವಶ್ಯಕ ಸಾಮಗ್ರಿಗಳನ್ನು ಒದಗಿಸುತ್ತಿಲ್ಲ. ಜೊತೆಗೆ ಆಸ್ಪತ್ರೆಯ ಶೌಚಾಲಯಗಳು ಕೂಡ ಅವ್ಯವಸ್ಥೆಯಿಂದ ಕೂಡಿದೆ ಎನ್ನುವ ಆರೋಪಗಳು ಚಿಕಿತ್ಸೆ ಪಡೆಯುತ್ತಿರುವವರಿಂದ ಕೇಳಿ ಬಂದಿದೆ ಎಂದು ತಿಳಿಸಿದರು.
ಜಿಲ್ಲಾಡಳಿತ ಸೋಂಕು ಕಾಣಿಸಿಕೊಂಡ ಪ್ರದೇಶವನ್ನು ಸೀಲ್ ಡೌನ್ ಮಾಡಿದ್ದು, ಅಲ್ಲಿರುವ ನಿವಾಸಿಗಳಿಗೆ ಅಗತ್ಯ ದಿನಬಳಕೆಯ ವಸ್ತುಗಳನ್ನು ಕೂಡ ಸರಬರಾಜು ಮಾಡುತ್ತಿಲ್ಲ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೆ ವಿವಿಧ ಅಂಗಡಿ ಮಾಲೀಕರ ದೂರವಾಣಿ ಸಂಖ್ಯೆ ನೀಡಿ ಅಲ್ಲಿಂದ ಖರೀದಿಸುವಂತೆ ತಿಳಿಸುತ್ತಿದ್ದಾರೆ. ಜನರೇ ಅಂಗಡಿಗಳಿಂದ ಖರೀದಿಸುವುದಾದರೆ ಸೀಲ್ ಡೌನ್ ಮಾಡುವ ಔಚಿತ್ಯವಾದರು ಏನಿದೆ ಎಂದು ಇಸಾಕ್ ಖಾನ್ ಪ್ರಶ್ನಿಸಿದರು.
ಈ ಎಲ್ಲಾ ಅವ್ಯವಸ್ಥೆಗಳ ಬಗ್ಗೆ ಜಿಲ್ಲೆಯ ಶಾಸಕರು ಹಾಗೂ ಸಂಸದರು ಉತ್ತರಿಸಬೇಕಿದೆ. ಜನರ ಜೀವ ರಕ್ಷಣೆ ಮಾಡುವುದು ಎಲ್ಲಾ ರಾಜಕೀಯ ಪಕ್ಷಗಳ ಕರ್ತವ್ಯವಾಗಿದೆ. ಆದರೂ ಜನಪ್ರತಿನಿಧಿಗಳಾದವರು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
::: ನಾಳೆ ಪ್ರತಿಭಟನೆ :::
ಜಿಲ್ಲಾಡಳಿತದ ನಿರ್ಲಕ್ಷ್ಯದ ವಿರುದ್ಧ ಜು.2 ರಂದು ಬೆಳಗ್ಗೆ 10.30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜೆಡಿಎಸ್ ವತಿಯಿಂದ ಪ್ರತಿಭಟನೆ ನಡೆಯಲಿದೆ ಎಂದು ಇಸಾಕ್ ಖಾನ್ ತಿಳಿಸಿದರು.
ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಪಿ.ಎ.ಯೂಸುಫ್ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿರುವುದಾಗಿ ಹೇಳಿಕೊಂಡಿದೆ. ಆದರೆ, ಸೋಂಕಿತರಿಗೆ ಅಗತ್ಯ ಸೌಲಭ್ಯಗಳನ್ನು ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಇದನ್ನು ಗಮನಿಸಿದರೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವುದು 20 ಲಕ್ಷ ಕೋಟಿಯೋ ಅಥವಾ 20 ಲಕ್ಷವೋ ಎನ್ನುವ ಅನುಮಾನ ಮೂಡುತ್ತಿದೆ ಎಂದು ಟೀಕಿಸಿದರು.
ಈ ಹಿಂದೆ ಕೊಂಡಂಗೇರಿಯಲ್ಲಿ ಪ್ರಥಮ ಕೊರೊನಾ ಪ್ರಕರಣ ದಾಖಲಾದ ಸಂದರ್ಭ ಜಿಲ್ಲಾಡಳಿತ ಸೀಲ್ ಡೌನ್ ಪ್ರದೇಶದ ಎಲ್ಲ ಕುಟುಂಬಗಳಿಗೂ ದಿನ ಬಳಕೆಯ ಸಾಮಗ್ರಿಗಳನ್ನು ಸರಬರಾಜು ಮಾಡಿತ್ತು. ಆದರೆ, ಪ್ರಸಕ್ತ ಆ ವ್ಯವಸ್ಥೆಯನ್ನು ಜಿಲ್ಲಾಡಳಿತ ಕೈ ಬಿಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ವೀರಾಜಪೇಟೆ ತಾಲ್ಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮಜೀದ್, ಮೂರ್ನಾಡು ಗ್ರಾ.ಪಂ ಸದಸ್ಯ ಸಾದಿಕ್, ಜಿಲ್ಲಾ ಸಮಿತಿ ಸದಸ್ಯ ನಜೀರ್ ಹಾಗೂ ಸುಂಟಿಕೊಪ್ಪ ಗ್ರಾ.ಪಂ ಮಾಜಿ ಅಧ್ಯಕ್ಷ ಪಿ.ಇ.ಕರೀಂ ಉಪಸ್ಥಿತರಿದ್ದರು.