ಪಾಳುಬಿದ್ದ ಮಡಿಕೇರಿ ಕೋಟೆಯಲ್ಲಿ ಆಮೆಗತಿಯಲ್ಲಿ ಸಾಗುತ್ತಿದೆ ಅಭಿವೃದ್ಧಿ ಕಾರ್ಯ

01/07/2020

ಮಡಿಕೇರಿ ಜು.1 : ಮಡಿಕೇರಿ ಕೋಟೆ ಆವರಣ ಮತ್ತು ಅರಮನೆಯ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ 8.5 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿ ಹಲವು ತಿಂಗಳುಗಳೇ ಆಗಿದ್ದು, ಈ ಅನುದಾನವನ್ನು ಬಳಸಿಕೊಂಡು ಮೂಲ ವಾಸ್ತುಶಿಲ್ಪದೊಂದಿಗೆ ನವೀಕರಣಗೊಳಿಸಿ ಪ್ರೇಕ್ಷಣೀಯ ಸ್ಥಳವನ್ನಾಗಿ ಪರಿವರ್ತಿಸಲು ಭಾರತೀಯ ಪುರಾತತ್ವ ಇಲಾಖೆ ಮುಂದಾಗಬೇಕು ಎಂದು ಮಾಹಿತಿ ಹಕ್ಕು ಆಯೋಗದ ನಿವೃತ್ತ ಆಯುಕ್ತ ವಿರೂಪಾಕ್ಷಯ್ಯ ಅವರು ತಿಳಿಸಿದ್ದಾರೆ.
ಅಭಿವೃದ್ಧಿ ಕಾರ್ಯ ಆಮೆ ನಡಿಗೆಯಲ್ಲಿ ಸಾಗುತ್ತಿರುವುದರಿಂದ ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳ ತಂಡ ಬುಧವಾರ ನಗರದ ಕೋಟೆಗೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿತು.
ಈ ಸಂದರ್ಭ ಮಾತನಾಡಿದ ನಿವೃತ್ತ ಆಯುಕ್ತ ವಿರೂಪಾಕ್ಷಯ್ಯ ಅವರು ಪ್ರಥಮ ಹಂತದ ಕಾಮಗಾರಿಯನ್ನು 53 ಲಕ್ಷ ರೂ.ಗಳಲ್ಲಿ ನಡೆಸಲಾಗುತ್ತಿದ್ದು, ಹೆಚ್ಚಿನ ಹಣ ಮಂಜೂರಾಗಿರುವುದರಿಂದ ಅಭಿವೃದ್ಧಿ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಬೇಕು. ಅಲ್ಲದೆ ಕಾಮಗಾರಿಗೆ ಪುರಾತತ್ವ ಇಲಾಖೆಯು ವಿಧಿಸುತ್ತಿರುವ ಶೇ.10 ರಷ್ಟು ಸೇವಾ ಶುಲ್ಕವನ್ನು ರದ್ದುಗೊಳಿಸಬೇಕು ಎಂದರು.
ಪ್ರಸ್ತುತ ಕೋಟೆ ಕಾವಲಿಗೆ ನ್ಯಾಯಾಲಯದ ನಿರ್ದೇಶನದಂತೆ 24 ಗಂಟೆಗಳ ಕಾವಲುಗಾರರ ವ್ಯವಸ್ಥೆಯಿದ್ದು, ಮೇಲ್ಛಾವಣಿಯ ತುರ್ತು ಕಾಮಗಾರಿಯನ್ನು ತ್ವರಿತವಾಗಿ ಮುಗಿಸಬೇಕು ಎಂದು ಪುರಾತತ್ವ ಸಂರಕ್ಷಣಾ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ವಿರೂಪಾಕ್ಷಯ್ಯ ಸಲಹೆ ನೀಡಿದರು.
ಹಳೆಯ ಗಡಿಯಾರದ ಅವ್ಯವಸ್ಥೆ ಮತ್ತು ಪರಿಕರಗಳು ನಾಪತ್ತೆಯಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅರಸರ ಕಾಲದ ವರ್ಣಚಿತ್ರಗಳು ವಿರೂಪಗೊಂಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.
1920ರ ಆಗಿನ ಬ್ರಿಟೀಷ್ ಭಾರತ ಸರ್ಕಾರವು ಕೋಟೆಯನ್ನು ಸ್ಮಾರಕ ಎಂದು ಅಧಿಸೂಚನೆ ಹೊರಡಿಸಿದ್ದು, ಇದರ ಅನ್ವಯ ಭಾರತೀಯ ಪುರಾತತ್ವ ಇಲಾಖೆಗೆ ಕೋಟೆಯನ್ನು ಸಂಪೂರ್ಣವಾಗಿ ಸ್ವಾಧೀನ ಪಡಿಸಿಕೊಂಡು ಹೆಚ್ಚಿನ ಮುತುವರ್ಜಿ ವಹಿಸಿ ಸಂರಕ್ಷಿಸಬೇಕು ಎಂದು ಇದೇ ಸಂದರ್ಭ ತಿಳಿಸಿದರು.
ಭಾರತೀಯ ಪುರಾತತ್ವ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಚಂದ್ರಕಾಂತ್ ಅವರು ಪ್ರಸ್ತುತ ಕೋಟೆಯ ಮೇಲ್ಛಾವಣಿ ತಾತ್ಕಾಲಿಕ ದುರಸ್ತಿ ಕಾರ್ಯದ ಪ್ರಗತಿ ಕುರಿತು ಮಾಹಿತಿ ನೀಡಿದರು. ಮೊದಲನೇ ಹಂತದಲ್ಲಿ ಬಿಡುಗಡೆಯಾಗಿರುವ 53 ಲಕ್ಷ ರೂ. ಮೊತ್ತದ ಮೇಲ್ಛಾವಣಿ ದುರಸ್ತಿ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದರು.
ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಮದನ್ ಮೋಹನ್ ಅವರು ಕಾಮಗಾರಿಯ ಮೇಲುಸ್ತುವಾರಿ ಪ್ರಗತಿ ಕುರಿತು ಮಾಹಿತಿ ನೀಡಿದರು.
ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವರಾಮ್ ಹಾಜರಿದ್ದರು.