ಅನ್‍ಲಾಕ್ 2 : ಮುಂದಿನ ಆದೇಶದವರೆಗೆ ಕೊಡಗಿನಲ್ಲೂ ನಿರ್ಬಂಧ ಜಾರಿ

July 1, 2020

ಮಡಿಕೇರಿ ಜು.1 : ಕೊಡಗು ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಕುರಿತು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ದ ಅವರು ಆದೇಶ ಹೊರಡಿಸಿದ್ದಾರೆ.
ಸರ್ಕಾರದ ಮಾರ್ಗಸೂಚಿ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಲೆ ಜಿಲ್ಲಾ ವ್ಯಾಪ್ತಿಯಲ್ಲಿ ಅನ್‍ಲಾಕ್ 2 ಅವಧಿಯ ನಿರ್ಬಂಧಾಜ್ಞೆಯನ್ನು ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ ಎಂದು ಅವರು ತಿಳಿಸಿದ್ದಾರೆ. ಕಂಟೈನ್‍ಮೆಂಟ್ ಪ್ರದೇಶಗಳಲ್ಲಿ ಯಾವುದೇ ಚಟುವಟಿಕೆ ನಡೆಸಬಾರದು. ಶಾಲೆ, ಕಾಲೇಜು, ಶೈಕ್ಷಣಿಕ, ತರಬೇತಿ, ಕೋಚಿಂಗ್ ಕೇಂದ್ರಗಳು, ಸಿನಿಮಾ ಹಾಲ್, ಶಾಪಿಂಗ್ ಮಾಲ್‍ಗಳು, ಜಿಮ್ನಾಸಿಯಂ, ಕ್ರೀಡಾ ಸಮುಚ್ಚಯ, ಈಜು ಕೊಳ, ಮನೋರಂಜನಾ ಪಾರ್ಕ್, ಥಿಯೇಟರ್‍ಗಳು, ಬಾರ್ ಮತ್ತು ಅಡಿಟೋರಿಯಂ, ಅಸೆಂಬ್ಲಿ ಹಾಲ್ ಮತ್ತು ಇಂತಹ ಸ್ಥಳಗಳು. ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡೆ, ಮನೋರಂಜನೆ, ಶೈಕ್ಷಣಿಕ, ಸಾಂಸ್ಕøತಿಕ, ಧಾರ್ಮಿಕ ಮುಂತಾದ ಒಗ್ಗೂಡುವಿಕೆಗಳು, ಈ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದಂತೆ ಅನುಮತಿಸಲಾದ ಎಲ್ಲಾ ಚಟುವಟಿಕೆಗಳನ್ನು ಸೋಮವಾರದಿಂದ ಶನಿವಾರದವರೆಗೆ ನಡೆಸಬಹುದಾಗಿದೆ
ಉಳಿದಂತೆ ಎಲ್ಲಾ ರೀತಿಯ ಚಟುವಟಿಕೆ ಮತ್ತು ವ್ಯಕ್ತಿಗಳ ಸಂಚಾರವನ್ನು ಜಿಲ್ಲೆಯಾದ್ಯಂತ ವಾರದ ಎಲ್ಲಾ ದಿನಗಳಲ್ಲಿಯೂ ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕಡ್ಡಾಯವಾಗಿ ನಿರ್ಬಂಧಿಸಿದೆ. ಜು.5 ರಿಂದ ಆ.2 ರ ವರೆಗೆ 4 ಭಾನುವಾರಗಳಂದು ಅವಶ್ಯ ಚಟುವಟಿಕೆ, ತುರ್ತು, ವೈದ್ಯಕೀಯ ಹಿನ್ನಲೆ ಹೊರತುಪಡಿಸಿ ಉಳಿದಂತೆ ಪೂರ್ಣ ಪ್ರಮಾಣದಲ್ಲಿ ದಿನ ಪೂರ್ತಿ ಲಾಕ್‍ಡೌನ್ ಇರುತ್ತದೆ. ಪೂರ್ವ ನಿಯೋಜಿತ ಮದುವೆ ಕಾರ್ಯಕ್ರಮಗಳಿದ್ದಲ್ಲಿ ಷರತ್ತುಬದ್ಧವಾಗಿ ನಡೆಸಬಹುದಾಗಿದೆ.
ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು, ಕಚೇರಿಗಳು, ಬೋರ್ಡ್‍ಗಳು ಮತ್ತು ಕಾರ್ಪೋರೇಷನ್ನುಗಳು (ತುರ್ತು ಮತ್ತು ಅಗತ್ಯ ಸೇವೆಗಳನ್ನು ಒದಗಿಸುವ ಇಲಾಖೆಗಳು, ಕಚೇರಿಗಳು, ಬೋರ್ಡ್‍ಗಳು ಮತ್ತು ಕಾರ್ಪೋರೇಷನ್ನುಗಳನ್ನು ಹೊರತುಪಡಿಸಿ) ಜುಲೈ, 10 ರಿಂದ ಆಗಸ್ಟ್, 2 ನೇ ವಾರದ ವರೆಗೆ ಎಲ್ಲಾ ಶನಿವಾರ ಮುಚ್ಚಲ್ಪಡುತ್ತದೆ.
65 ವರ್ಷ ಮೇಲ್ಪಟ್ಟವರು, ಸಹ ಅಸ್ವಸ್ಥತೆ ಉಳ್ಳವರು, ಗರ್ಭಿಣಿ ಮಹಿಳೆಯರು, 10 ವರ್ಷದ ಒಳಗಿನ ಮಕ್ಕಳು ತಮ್ಮ ಮನೆಯಿಂದ ಹೊರಬರಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮೂಗು ಮತ್ತು ಬಾಯಿಯನ್ನು ಮುಚ್ಚುವಂತೆ ಮುಖಗವಸು ಧರಿಸಬೇಕು. ಮತ್ತೊಬ್ಬರಿಂದ ಕನಿಷ್ಟ 2 ಮೀಟರ್ (6 ಅಡಿ) ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಉಲ್ಲಂಘನೆಗೆ ಸ್ಥಳದಲ್ಲೇ ರೂ.100 ದಂಡ ವಿಧಿಸಿ ವಸೂಲಿಸಲಾಗುವುದು. ಮದುವೆ ಕಾರ್ಯಕ್ರಮಗಳಲ್ಲಿ ಗರಿಷ್ಟ 50 ಮತ್ತು ಅಂತ್ಯ ಸಂಸ್ಕಾರಗಳಂತಹ ಕಾರ್ಯಕ್ರಮಗಳಲ್ಲಿ ಗರಿಷ್ಟ 20 ಕ್ಕಿಂತ ಹೆಚ್ಚಿಗೆ ಜನ ಸೇರುವಂತಿಲ್ಲ.
ಅಂಗಡಿ ಮುಂಗಟ್ಟುಗಳಲ್ಲಿ ಮತ್ತು ವ್ಯಾಪಾರ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ನಿಷೇಧಿಸಿದೆ. ಉಲ್ಲಂಘನೆಯು ದಂಡನೀಯವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ಬೀಡ, ಗುಟ್ಕಾ ಹಾಗೂ ತಂಬಾಕು ಸೇವನೆ ನಿಷೇಧಿಸಿದೆ. ಸಾರ್ವಜನಿಕ ಹಿತಾಸಕ್ತಿಯಿಂದ ಆದೇಶ ಹೊರಡಿಸಲಾಗಿದ್ದು. ವಿನಾಕಾರಣ ತಿರುಗಾಡುವುದು, ಗುಂಪುಗೂಡುವುದು ಮಾಡತಕ್ಕದ್ದಲ್ಲ. ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಆದೇಶದ ಉಲ್ಲಂಘನೆಯು ದಂಡನೀಯವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶ ಹೊರಡಿಸಿದ್ದಾರೆ.

error: Content is protected !!