ಸ್ವಯಂ ನಿಯಮ ಪಾಲನೆ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ : ಕೊಡಗು ಚೇಂಬರ್ ಆಫ್ ಕಾಮರ್ಸ್ ಮನವಿ

ಮಡಿಕೇರಿ ಜು.1 : ಜಿಲ್ಲೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಅರ್ಧದಿನ ಬಂದ್ ಮಾಡುತ್ತಿರುವುದರಿಂದ ಕೊರೋನಾ ಸೋಂಕು ಹರಡದಂತೆ ತಡೆಯಲು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟಿರುವ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನ ಪ್ರಧಾನ ಕಾರ್ಯದರ್ಶಿ ಅಂಬೆಕಲ್ ನವೀನ್ ಕುಶಾಲಪ್ಪ ಸ್ವಯಂ ನಿಯಮ ಪಾಲನೆಯ ಮೂಲಕ ಜನರು ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಸಾರ್ವಜನಿಕರು ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ವಾರಕ್ಕೆ ಒಂದು ಬಾರಿ ಮಾತ್ರ ಖರೀದಿಸಲು ಮುಂದಾಗಬೇಕು. ಖರೀದಿಗಾಗಿ ಅಂಗಡಿಗಳಿಗೆ ಮನೆಯ ಒಬ್ಬ ವ್ಯಕ್ತಿಯನ್ನು ಮಾತ್ರ ಕಳುಹಿಸಬೇಕು. ಅನಿವಾರ್ಯ ಕಾರ್ಯಗಳಿದ್ದರೆ ಮಾತ್ರ ಮನೆಯಿಂದ ಹೊರಗೆ ಬರಬೇಕು. 10 ವರ್ಷದೊಳಗಿನ ಮಕ್ಕಳು ಮತ್ತು 60 ವರ್ಷದ ಮೇಲಿನ ವಯೋವೃದ್ದರು ಆದಷ್ಟು ಮನೆಯಲ್ಲೇ ಇರುವಂತೆ ಅವರು ಮನವಿ ಮಾಡಿದ್ದಾರೆ.
ಈಗಾಗಲೇ ಅಭ್ಯಾಸವಾಗಿರುವ ಮಾಸ್ಕ್, ಸ್ಯಾನಿಟೈಸರ್ ಬಳಕೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮವನ್ನು ಮುಂದುವರೆಸಬೇಕು. ಜಿಲ್ಲಾಡಳಿತ ಆಯಾ ಕಾಲಕ್ಕೆ ಸೂಚಿಸುವ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಬೇಕೆಂದು ನವೀನ್ ಕುಶಾಲಪ್ಪ ಕೋರಿದ್ದಾರೆ.