ಟೆಲಿಮೆಡಿಸನ್ ಮೂಲಕ ಚಿಕಿತ್ಸೆ

02/07/2020

ಬೆಂಗಳೂರು ಜು.2 : ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳು ದ್ವಿಗುಣಗೊಳ್ಳುವ ವೇಗ ತಗ್ಗಿಸಿ ಟೆಲಿಮೆಡಿಸನ್ ಮೂಲಕ ಚಿಕಿತ್ಸೆ ನೀಡುವ ಕುರಿತು ತಜ್ಞರು ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಕೊರೋನಾ ರೋಗ ಲಕ್ಷಣ ಕಡಿಮೆ ಪ್ರಮಾಣದಲ್ಲಿದ್ದರೆ ಮನೆಯಲ್ಲಿಯೇ ಕ್ವಾರೆಂಟೀನ್ ಮಾಡಿ ಚಿಕಿತ್ಸೆ ನೀಡುವ ಕುರಿತಂತೆಯೂ ಗಂಭೀರವಾಗಿ ಪರಿಶೀಲನೆ ಮಾಡಲಾಗುವುದು ಎಂದಿದ್ದಾರೆ.
ಕೊರೋನಾ ಸೋಂಕು ನಿಯಂತ್ರಣ ಕುರಿತು ತಜ್ಞರ ಜತೆ ಚರ್ಚಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ, ಸೋಂಕು ನಿಯಂತ್ರಣ ಕ್ರಮಗಳ ಅನುಷ್ಠಾನಕ್ಕೆ ಇನ್ನಷ್ಟು ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುವುದು. ರಾತ್ರಿ ಕಫ್ರ್ಯೂ ಉಲ್ಲಂಘಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಆಸ್ಪತ್ರೆಗಳಿಗೆ ಆಮ್ಲಜನಕ, ಔಷಧಿಗಳ ಪೂರೈಕೆ ಸರಪಣಿ ಅಬಾಧಿತವಾಗಿರುವಂತ ನೋಡಿಕೊಳ್ಳುವ ಜತೆಗೆ ಕೋವಿಡ್ ಕುರಿತು ಭೀತಿಯ ವಾತಾವರಣ ನಿವಾರಿಸಲು ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಲಾಗುವುದು. ತಜ್ಞರು ನೀಡಿರುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಹಂತಹಂತವಾಗಿ ಅನುಷ್ಠಾನಕ್ಕೆ ತರಲಾಗುವುದು ಎಂದರು.