ರೈತರ ಸಾಲ ಮರು ಪಾವತಿ ಅವಧಿ ವಿಸ್ತರಣೆಗೆ ಚಿಂತನೆ : ಮಡಿಕೇರಿಯಲ್ಲಿ ಸಚಿವ ಸೋಮಶೇಖರ್ ಮುನ್ಸೂಚನೆ

02/07/2020

ಮಡಿಕೇರಿ ಜು. 2 : ಜೂನ್ 30ಕ್ಕೆ ರೈತರ ಸಾಲ ವಾಪಸ್ ಕೊಡಲು ಕೊನೇ ದಿನಾಂಕವಿತ್ತು. ಇನ್ನೂ ಡಿಸೆಂಬರ್ ವರೆಗೆ ಮರುಪಾವತಿ ಮಾಡುವಂತೆ ಆಗ್ರಹಗಳು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಆರ್ಥಿಕ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದ್ದಲ್ಲದೆ, ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ. ಇನ್ನು 2-3 ದಿನಗಳಲ್ಲಿ ತೀರ್ಮಾನವನ್ನು ಪ್ರಕಟಿಸಲಾಗುವುದು ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಇಲ್ಲಿನ ಕೊಡಗು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಹಕಾರ ಇಲಾಖೆ ವತಿಯಿಂದ ಕೊರೋನಾ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆಯರಿಗೆ ತಲಾ 3000 ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮಕ್ಕೆ ಚೆಕ್ ನೀಡುವ ಮೂಲಕ ಚಾಲನೆ ನೀಡಿ ಸಚಿವರು ಮಾತನಾಡಿದರು.

ಕೋವಿಡ್ ಪರಿಸ್ಥಿತಿ ಇನ್ನೂ ಮುಂದುವರಿದಿರುವ ಕಾರಣ ಸಾಲ ಮರುಪಾವತಿ ಅವಧಿಯನ್ನು ವಿಸ್ತರಣೆ ಮಾಡಬೇಕೆಂಬ ಬಗ್ಗೆ ರೈತರಿಂದ ಮನವಿಗಳು ಬಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಜೊತೆಯೂ ಚರ್ಚಿಸಲಾಗಿದೆ ಎಂದು ತಿಳಿಸಿದರು.

ರೈತರಿಗೆ 20 ಸಾವಿರ ಕೋಟಿ ರೂ. ಸಾಲ ನೀಡುವ ಗುರಿ; ಕೇಂದ್ರಕ್ಕೆ ಮನವಿ

ಕಳೆದ ವರ್ಷ ರೈತರಿಗೆ 13,500 ಕೋಟಿ ರೂಪಾಯಿ ಸಾಲ ಕೊಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ನಬಾರ್ಡ್ ನಿಂದ ಹೆಚ್ಚುವರಿ ಒಂದು ಸಾವಿರ ಕೋಟಿ ರೂಪಾಯಿ ಲಭಿಸಿರುವುದರಿಂದ ಈ ಬಾರಿ 14,500 ಕೋಟಿ ರೂಪಾಯಿ ಸಾಲ ನೀಡಲು ಚಾಲನೆ ಕೊಟ್ಟಿದ್ದೇವೆ. ಎಲ್ಲ ರೈತರಿಗೂ ಸಂಪೂರ್ಣವಾಗಿ ಸಾಲ ಸಿಗಬೇಕು ಎಂಬ ದೃಷ್ಟಿಯಿಂದ ಮುಂದಿನ ಸಾಲಿನಲ್ಲಿ 20 ಸಾವಿರ ಕೋಟಿ ರೂಪಾಯಿ ಸಾಲದ ವ್ಯವಸ್ಥೆ ಮಾಡಬೇಕು. ಈ ಸಂಬಂಧ ಕೇಂದ್ರದ ಗಮನ ಸೆಳೆಯಬೇಕೆಂದು ಮಾನ್ಯ ಮುಖ್ಯಮಂತ್ರಿಗಳ ಬಳಿಯೂ ಮನವಿ ಮಾಡಿದ್ದೇವೆ ಎಂದು ಸಚಿವರು ತಿಳಿಸಿದರು.

ಆಶಾ ಕಾರ್ಯಕರ್ತೆಯರಿಗೆ ಶೀಘ್ರ ಸಾಲ : ಆಶಾ ಕಾರ್ಯಕರ್ತೆಯರಿಗೆ ಆರ್ಥಿಕ ಭದ್ರತೆ ಕೊಡುವ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ಚಿಂತನೆ ನಡೆಯುತ್ತಿದೆ. ಸ್ವಸಹಾಯ ಸಂಘ ಹಾಗೂ ಸ್ತ್ರೀಶಕ್ತಿ ಸಂಘಗಳ ಮಾದರಿ ಸಾಲ ನೀಡುವ ಸಂಬಂಧ ಈಗಾಗಲೇ ಸರ್ಕಾರದ ಮಟ್ಟದಲ್ಲಿ 2-3 ಸುತ್ತಿನ ಸಭೆಗಳು ನಡೆದಿದ್ದು, ಶೀಘ್ರದಲ್ಲಿಯೇ ನಿರ್ಧಾರವನ್ನು ಪ್ರಕಟಿಸಲಾಗುವುದು ಎಂದು ಸಚಿವರು ತಿಳಿಸಿದರು.
ಶೀಘ್ರ ಎಲ್ಲರಿಗೂ ವಿತರಣೆ
42685 ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂಪಾಯಿ ಪ್ರೋತ್ಸಾಹಧನ ವಿತರಣೆ ಮಾಡಲಾಗುತ್ತಿದ್ದು, ಈಗಾಗಲೇ 23 ಜಿಲ್ಲೆಗಳಿಂದ ಸುಮಾರು 21 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರಿಗೆ ವಿತರಣೆ ಮಾಡಲಾಗಿದೆ. ಶೀಘ್ರದಲ್ಲಿ ಎಲ್ಲರಿಗೂ ಸಂದಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಗೆ ನಾನೇ ಖುದ್ದು ಭೇಟಿ ನೀಡಿ ಆಯಾ ಶಾಸಕರ ಸಮ್ಮುಖದಲ್ಲಿ ವಿತರಣೆ ಮಾಡಿ, ಆಶಾ ಕಾರ್ಯಕರ್ತೆಯರ ಸೇವೆಗೆ ಬೆನ್ನುತಟ್ಟುವ ಕಾರ್ಯವನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ರಾಜ್ಯ ಸರ್ಕಾರದ ನಿಯಮಗಳನ್ನು ನಾವು ಎಂದೂ ಮುರಿಯುತ್ತಿಲ್ಲ. 50ರಿಂದ 80 ಮಂದಿಯನ್ನು ಸೇರಿಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಈಗಿನ ಪರಿಸ್ಥಿತಿಯಲ್ಲಿ ಸಾಮಾಜಿಕ ಅಂತರ ಬಹಳ ಮುಖ್ಯ. ಹಾಗಾಗಿ ಎಲ್ಲರೂ ಸುರಕ್ಷತೆ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಚಿವರು ಸಲಹೆ ನೀಡಿದರು.
ಸಚಿವರಿಂದ ಉತ್ತಮ ಕಾರ್ಯ : ಶಾಸಕರಾದ ಅಪ್ಪಚ್ಚು ರಂಜನ್ ಮಾತನಾಡಿ, ಸಚಿವ ಸೋಮಶೇಖರ್ ಅವರು ಸಹಕಾರ ಇಲಾಖೆ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 53 ಕೋಟಿ ರೂಪಾಯಿಯನ್ನು ಸಂಗ್ರಹಿಸಿ ಕೊಟ್ಟಿದ್ದಾರೆ. ಇದಕ್ಕೆ ಅನೇಕ ಸಹಕಾರಿಗಳ ಕೊಡುಗೆ ಇದೆ. ಇದು ಉತ್ತಮ ಕಾರ್ಯ ಎಂದು ತಿಳಿಸಿದರು.
ಸಹಕಾರ ಸಚಿವರಿಗೆ ಅಭಿನಂದನೆ
ಶಾಸಕರಾದ ಕೆ.ಜಿ.ಬೋಪಯ್ಯ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಎಸ್.ಟಿ.ಸೋಮಶೇಖರ್ ಅವರು ಈಗ ಅದೇ ಖಾತೆಗೆ ಸಚಿವರಾಗಿದ್ದು, ಅಭಿವೃದ್ಧಿ ದೃಷ್ಟಿಯಿಂದ ಸಹಾಯವಾಗಿದೆ. ಅವರ ಇಲಾಖೆಯಿಂದ ಪ್ರೋತ್ಸಾಹಧನ ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ರುಪೇ ಕಾರ್ಡ್ ಬಗ್ಗೆ ಹೊಸ ಆದೇಶ ಹೊರಡಿಸಲಾಗಿತ್ತು. ಇದರಿಂದ ರೈತರಿಗೆ ತೀವ್ರ ಸಮಸ್ಯೆಯಾಗುತ್ತಿದ್ದ ಹಿನ್ನೆಲೆಯಲ್ಲಿ ನಾವೆಲ್ಲರೂ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸಹಕಾರ ಸಚಿವರಾದ ಸೋಮಶೇಖರ್ ಅವರ ಗಮನಕ್ಕೂ ತಂದಾಗ ಅವರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಿಎಂಗೆ ಮನವರಿಕೆ ಮಾಡಿ ಹಳೇ ಪದ್ಧತಿಯೇ ಯಥಾವಥ್ಥಾಗಿ ಮುಂದುವರಿಸುವಂತೆ ಪುನರ್ ಆದೇಶ ನೀಡುವಂತೆ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಜನರು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಬೇಕು. ಸ್ಯಾನಿಟೈಸರ್, ಮಾಸ್ಕ್ ಹಾಕಿಕೊಳ್ಳುವುದರ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ವಿಧಾನಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ, ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್, ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ಜಿಲ್ಲಾಧಿಕಾರಿ ಅನ್ನೀಸ್ ಕಣ್ಮನಿ ಜಾಯ್, ಸಿಇಒ ಜೆ.ಲಕ್ಷ್ಮೀ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಗಣಪತಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.