ಮತ್ತೆ ಇಬ್ಬರಲ್ಲಿ ಕೊರೋನಾ ಸೋಂಕು ಪತ್ತೆ : ಒಂದು ವರ್ಷದ ಮಗುವನ್ನು ಕಾಡಿದ ವೈರಸ್

July 2, 2020

ಮಡಿಕೇರಿ ಜು. 2 : ಕೊಡಗು ಜಿಲ್ಲೆಯಿಂದ ಕೇರಳದ ವಯನಾಡು ಮತ್ತು ಕಣ್ಣೂರು ಜಿಲ್ಲೆಗಳಿಗೆ ಪ್ರಯಾಣಿಸಿದ್ದ ವ್ಯಕ್ತಿಗಳಿಗೆ ಕೋವಿಡ್ ಸೋಂಕು ತಗುಲಿರುವ ಬಗ್ಗೆ ವಯನಾಡು ಮತ್ತು ಕಣ್ಣೂರು ಜಿಲ್ಲಾಡಳಿತದಿಂದ ಮಾಹಿತಿ ಬಂದ ಮೇರೆಗೆ ಪರಿಶೀಲಿಸಲಾಗಿದ್ದು, ಕೊಡಗು ಜಿಲ್ಲೆಯಲ್ಲಿ ಮತ್ತೆ ಹೊದಾಗಿ ಇಬ್ಬರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಟಿ.ಶೆಟ್ಟಿಗೇರಿಯ ಈಸ್ಟ್ ನೆಮ್ಮಲೆ ಗ್ರಾಮದ ಕಾಫಿ ತೋಟವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ 40 ವರ್ಷದ ಮಹಿಳೆಯೊಬ್ಬರು ದಿನಾಂಕ:23-06-2020 ರಂದು ಬಸ್ಸಿನಲ್ಲಿ ಕೇರಳ ರಾಜ್ಯದ ತೋಲ್ಪಟ್ಟಿಯ ತಿರುನಲ್ವೇಲಿ ಪಂಚಾಯತ್ ನ ಅರುಣಪಾರ ಕಾಲೋನಿಗೆ ಕೊಡಗಿನಿಂದ ಗೋಣಿಕೊಪ್ಪ-ಹುಣಸೂರು-ಮೈಸೂರು-ಹೆಚ್.ಡಿ.ಕೋಟೆ-ಬಾವಲಿ ಮಾರ್ಗವಾಗಿ ತೆರಳಿರುತ್ತಾರೆ.

ಇವರು ಜೂ. 24 ರಂದು ಕೇರಳದ ಮುತ್ತಂಗದಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಜೂ. 29 ರಂದು ಬಂದ ವರದಿಯಲ್ಲಿ ಕೋವಿಡ್ ಸೋಂಕು ಇರುವುದು ದೃಢಪಟ್ಟಿರುತ್ತದೆ. ನಂತರ ಇವರನ್ನು ಕೇರಳ ರಾಜ್ಯದ ಮಾನಂದವಾಡಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ.

ಈ ಪ್ರಕರಣದಲ್ಲಿ ಸದರಿ ಮಹಿಳೆಯು ಕೊಡಗಿನಲ್ಲಿ ನೆಲೆಸಿದ್ದ ವಿರಾಜಪೇಟೆ ತಾಲ್ಲೂಕಿನ ಟಿ.ಶೆಟ್ಟಿಗೇರಿಯ ಈಸ್ಟ್ ನೆಮ್ಮಲೆ ಗ್ರಾಮದ ಕಾಫಿ ತೋಟದ ಮಾಲೀಕರು ಮತ್ತು ಕುಟುಂಬದವರು ಪ್ರಾಥಮಿಕ ಸಂಪರ್ಕವಾಗಿದ್ದು, ಇವರ ಗಂಟಲು/ಮೂಗು ದ್ರವ ಮಾದರಿಯನ್ನು ಈಗಾಗಲೇ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.

ಇನ್ನೊಂದು ಪ್ರಕರಣದಲ್ಲಿ 1 ವರ್ಷದ ಹೆಣ್ಣು ಮಗು ತಾಯಿಯೊಂದಿಗೆ ಕೊಡಗಿನ ವಿರಾಜಪೇಟೆಯ ರಾಮನಗರದಲ್ಲಿ ತನ್ನ ಅಜ್ಜನ ಮನೆಯಲ್ಲಿ ನೆಲೆಸಿದ್ದು, ಜೂ. 18 ರಂದು ಕೇರಳದ ಇರಿಟ್ಟಿಗೆ ತಾಯಿಯೊಂದಿಗೆ ತೆರಳಿರುತ್ತದೆ.ಜೂ. 28 ರಂದು ಸದರಿ ಮಗುವಿನ ಗಂಟಲು/ಮೂಗು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದು, ವರದಿಯಲ್ಲಿ ಕೋವಿಡ್ ಸೋಂಕು ಇರುವುದು ದೃಢಪಟ್ಟ ಕಾರಣ ಮಗುವನ್ನು ಕೇರಳದ ಕಣ್ಣೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮಗುವಿನ ತಂದೆ ಮತ್ತು ತಾಯಿಯ ಪರೀಕ್ಷಾ ವರದಿ ಬರಲು ಬಾಕಿ ಇದೆ.

ಈ ಪ್ರಕರಣದಲ್ಲಿ ಮಗು ನೆಲೆಸಿದ್ದ ಕೊಡಗಿನ ವಿರಾಜಪೇಟೆಯ ರಾಮನಗರದಲ್ಲಿರುವ ಮಗುವಿನ ತಾತನ ಮನೆಯ ಸದಸ್ಯರು ಪ್ರಾಥಮಿಕ ಸಂಪರ್ಕವಾಗಿದ್ದು, ಇವರ ಗಂಟಲು/ಮೂಗಿನ ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲು ಕ್ರಮ ವಹಿಸಲಾಗುತ್ತಿದೆ.

ಈ ಮೇಲಿನ ಎರಡೂ ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕದ ವ್ಯಕ್ತಿಗಳ ಗಂಟಲು/ಮೂಗಿನ ದ್ರವ ಮಾದರಿ ಪರೀಕ್ಷೆಗೆ ಕ್ರಮ ವಹಿಸಲಾಗಿದೆ ಮತ್ತು ಅವರನ್ನು ಕಡ್ಡಾಯವಾಗಿ ಗೃಹ ಸಂಪರ್ಕ ತಡೆಯಲ್ಲಿರಲು ಸೂಚಿಸಲಾಗಿದೆ. ಆದ್ದರಿಂದ ಜಿಲ್ಲೆಯ ಸ್ಥಳೀಯ ಜನತೆ ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯ ಇರುವುದಿಲ್ಲ.