ನಗರಸಭೆ ವಿರುದ್ಧ ಪ್ರತಿಭಟನೆ : ಜೆಡಿಎಸ್ ಯುವ ಘಟಕ ಎಚ್ಚರಿಕೆ

02/07/2020

ಮಡಿಕೇರಿ ಜು.2 : ನಗರ ವ್ಯಾಪ್ತಿಯಲ್ಲಿನ ರಸ್ತೆಗಳ ಅವ್ಯವಸ್ಥೆ ಮತ್ತು ತೆರಿಗೆ ಪಾವತಿಯಲ್ಲಿನ ಗೊಂದಲಗಳನ್ನು ಶೀಘ್ರ ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವ ಜಾತ್ಯತೀತ ಜನತಾ ದಳದ ಮಡಿಕೇರಿ ನಗರ ಯುವ ಘಟಕ, ತಪ್ಪಿದಲ್ಲಿ ಪಕ್ಷದ ವತಿಯಿಂದ ನಗರಸಭಾ ಕಛೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಯುವ ಘಟಕದ ನಗರಾಧ್ಯಕ್ಷ ಎನ್.ರವಿಕಿರಣ್, ಕಳೆದ ಎರಡು ವಷರ್Àಗಳಲ್ಲಿ ಪ್ರಾಕೃತಿಕ ವಿಕೋಪದಿಂದ ಹಾನಿಗೀಡಾದ ನಗರದ ರಸ್ತೆಗಳನ್ನು ಅಭಿವೃದ್ಧಿ ಪಡಿಸದೆ ಮಡಿಕೇರಿ ನಗರಸಭೆÉ ನಿದ್ರಾವಸ್ಥೆಗೆ ಜಾರಿದೆ. ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಿದ ಬಳಿಕ ತರಾತುರಿಯಲ್ಲಿ ರಸ್ತೆ ಗುಂಡಿಗಳಿಗೆ ಹಳೇ ಕಟ್ಟಡಗಳ ಇಟ್ಟಿಗೆ ಕಲ್ಲುಗಳನ್ನು ತುಂಬಿ ಕಾಟಾಚಾರದ ಕಾಮಗಾರಿಯನ್ನು ನಿರ್ವಹಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಂದಾಯ ಪಾವತಿಗಾಗಿ ನಗರಸಭೆ ಸಾರ್ವಜನಿಕರ ಮೇಲೆ ಒತ್ತಡ ಹೇರುತ್ತಿದೆ. ಮತ್ತೊಂದೆಡೆ ತೆರಿಗೆ ಪಾವತಿಸಲು ತೆರಳಿದರೆ ಹತ್ತು ದಿನ ಬಿಟ್ಟು ಬರುವಂತೆ ಸೂಚಿಸಲಾಗುತ್ತಿದೆ. ಅವರು ನೀಡಿದ ಅವಧಿಗೆ ಹೋದರೂ ಮತ್ತೆ ಕಾಲಾವಕಾಶ ಕೋರುತ್ತಿದ್ದಾರೆ. ಇತ್ತೀಚೆಗೆ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲಸ ಕಾರ್ಯಗಳು ಮತ್ತಷ್ಟು ನಿಧಾನ ಗತಿಯಲ್ಲಿ ಸಾಗುತ್ತಿದೆ ಎಂದು ದೂರಿದ ಅವರು, ಸರ್ಕಾರದ ವೇತನ ಪಡೆದು ನಾಗರೀಕರಿಗೆ ಮೂಲಭೂತ ಸೌಕರ್ಯ ನೀಡಲಾಗದಿದ್ದಲ್ಲಿ ಅಂತಹ ಕಛೇರಿಯನ್ನು ಮುಚ್ಚುವುದೇ ಸೂಕ್ತವೆಂದು ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿಗಳು ನಗರಸಭೆಯ ಅವ್ಯವಸ್ಥೆಗಳನ್ನು ತಕ್ಷಣ ಸರಿಪಡಿಸಬೇಕು. ಇಲ್ಲದಿದ್ದಲ್ಲಿ ಪಕ್ಷದ ವತಿಯಿಂದ ನಗರಸಭೆ ಕಛೇರಿ ಎದುರು ಪ್ರತಿಭಟನೆ ನಡೆಸಲಾಗುವುದೆಂದು ರವಿಕಿರಣ್ ತಿಳಿಸಿದರು.
ನಗರ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಂ.ಯು.ಖಲೀಲ್ ಮಾತನಾಡಿ, ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿಯು ಲಾಕ್ ಡೌನ್ ಸಡಿಲಿಕೆಗೊಂಡ ಬಳಿಕ ದಿನೇ ದಿನೇ ಹೆಚ್ಚುತ್ತಿದೆ. ವಿದೇಶ ಹಾಗೂ ಹೊರ ರಾಜ್ಯಗಳಿಂದ ಬರುವವರನ್ನು ಯಾವುದೇ ತಪಾಸಣೆಗೆ ಒಳಪಡಿಸದೆ ಜಿಲ್ಲೆಯ ಒಳಗೆ ಬಿಡುತ್ತಿರುವುದರಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಡಳಿತ ಈಗಲಾದರು ಎಚ್ಚೆತ್ತುಕೊಂಡು ಈ ರೀತಿ ಹೊರಗಿನಿಂದ ಬರುವವರ ಮಾಹಿತಿ ಕಲೆ ಹಾಕಿ ಅವರೊಂದಿಗೆ ಸಾರ್ವಜನಿಕರು ಬೆರೆಯದಂತೆ ಕಟ್ಟೆಚ್ಚರ ವಹಿಸಬೇಕು ಎಂದರು.
ಖಾಸಗಿ ಹಣಕಾಸು ಸಂಸ್ಥೆಗಳು ಸಾಲ ವಸೂಲಾತಿಗೆ ಒತ್ತಡ ಹೇರುತ್ತಿವೆ. ಕೇಂದ್ರ ಸರ್ಕಾರ ಒತ್ತಡ ಹೇರದಂತೆ ಸ್ಪಷ್ಟ ನಿರ್ದೇಶನ ನೀಡಿದ್ದರು ಕೆಲವರು ದಬ್ಬಾಳಿಕೆ ನಡೆಸಿ, ಬಲವಂತದ ವಸೂಲಾತಿಗೆ ಮುಂದಾಗಿದ್ದಾರೆ. ಇಂತಹ ಸಂಸ್ಥೆಗಳ ವಿರುದ್ಧ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರವೇಶ ಶುಲ್ಕ ನೀಡುವಂತೆ ಪೋಷಕರ ಮೇಲೆ ಒತ್ತಡ ಹೇರುತ್ತಿದ್ದು, ಇದು ಸರಿಯಾದ ಕ್ರಮವಲ್ಲ. ಕೊರೊನಾ ಸಂಕಷ್ಟದ ಈ ಸಂದರ್ಭದಲ್ಲಿ ಕಂತುಗಳ ರೂಪದಲ್ಲಿ ಶುಲ್ಕ ವಸೂಲು ಮಾಡುವ ಮೂಲಕ ಜನತೆಗೆ ನೆರವಾಗಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಘಟಕದ ನಗರಾಧ್ಯಕ್ಷೆ ಸುನಂದಾ, ಎಸ್‍ಸಿ ಘಟಕದ ನಗರಾಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಅಜಿತ್ ಕೊಟ್ಟಕೇರಿಯನ ಹಾಗೂ ಸಂಘಟನಾ ಕಾರ್ಯದರ್ಶಿ ಗಣೇಶ್ ಉಪಸ್ಥಿತರಿದ್ದರು.