ಕೊಡಗಿನಿಂದ ಕೇರಳಕ್ಕೆ ತೆರಳಿದ್ದ ಇಬ್ಬರಲ್ಲಿ ಸೋಂಕು : ಸಂಬಂಧಿಕರ ಆರೋಗ್ಯ ಪರೀಕ್ಷೆ

July 2, 2020

ಮಡಿಕೇರಿ ಜು.2 : ಕೊಡಗಿನಿಂದ ಕೇರಳಕ್ಕೆ ತೆರಳಿದ್ದ ಇಬ್ಬರಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಕೊಡಗಿನಲ್ಲಿರುವ ಅವರ ಸಂಬಂಧಿಕರ ಹಾಗೂ ಪ್ರಾಥಮಿಕ ಸಂಪರ್ಕದಲ್ಲಿರುವವರ ಗಂಟಲು-ಮೂಗು ದ್ರವ ಮಾದರಿಯನ್ನು ಈಗಾಗಲೇ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಿಂದ ಕೇರಳದ ವಯನಾಡು ಮತ್ತು ಕಣ್ಣೂರು ಜಿಲ್ಲೆಗಳಿಗೆ ಪ್ರಯಾಣಿಸಿದ್ದ ವ್ಯಕ್ತಿಗಳಿಗೆ ಕೋವಿಡ್ ಸೋಂಕು ತಗುಲಿರುವ ಬಗ್ಗೆ ವಯನಾಡು ಮತ್ತು ಕಣ್ಣೂರು ಜಿಲ್ಲಾಡಳಿತದಿಂದ ಮಾಹಿತಿ ಬಂದ ಮೇರೆಗೆ ಪರಿಶೀಲನೆ ನಡೆಸಲಾಗಿದೆ. ಅದರಂತೆ ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ಟಿ.ಶೆಟ್ಟಿಗೇರಿಯ ಈಸ್ಟ್ ನೆಮ್ಮಲೆ ಗ್ರಾಮದ ಕಾಫಿ ತೋಟವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ 40 ವರ್ಷದ ಮಹಿಳೆಯೊಬ್ಬರು ಜೂ.23ರಂದು ಬಸ್ಸಿನಲ್ಲಿ ಕೇರಳ ರಾಜ್ಯದ ತೋಲ್ಪಟ್ಟಿಯ ತಿರುನಲ್ವೇಲಿ ಪಂಚಾಯತ್‍ನ ಅರುಣಪಾರ ಕಾಲೋನಿಗೆ ಗೋಣಿಕೊಪ್ಪ-ಹುಣಸೂರು-ಮೈಸೂರು-ಹೆಚ್.ಡಿ.ಕೋಟೆ-ಬಾವಲಿ ಮಾರ್ಗವಾಗಿ ತೆರಳಿದ್ದಾರೆ. ಅವರಿಗೆ ಜೂ.24ರಂದು ಕೇರಳದ ಮುತ್ತಂಗದಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಜೂ.29ರಂದು ಬಂದ ವರದಿಯಲ್ಲಿ ಕೋವಿಡ್ ಸೋಂಕು ಇರುವುದು ದೃಢಪಟ್ಟಿರುತ್ತದೆ. ನಂತರ ಇವರನ್ನು ಕೇರಳ ರಾಜ್ಯದ ಮಾನಂದವಾಡಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಈ ಪ್ರಕರಣದಲ್ಲಿ ಮಹಿಳೆಯು ಕೊಡಗಿನಲ್ಲಿ ನೆಲೆಸಿದ್ದ ಈಸ್ಟ್ ನೆಮ್ಮಲೆ ಗ್ರಾಮದ ಕಾಫಿ ತೋಟದ ಮಾಲಕರು ಮತ್ತು ಕುಟುಂಬದವರು ಪ್ರಾಥಮಿಕ ಸಂಪರ್ಕವಾಗಿದ್ದು, ಇವರ ಗಂಟಲು-ಮೂಗು ದ್ರವ ಮಾದರಿಯನ್ನು ಈಗಾಗಲೇ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
::: ಮಗುವಿನಲ್ಲಿ ಸೋಂಕು ದೃಢ :::
ಮತ್ತೊಂದು ಪ್ರಕರಣದಲ್ಲಿ ವೀರಾಜಪೇಟೆಯ ರಾಮನಗರದಲ್ಲಿ ತನ್ನ ಅಜ್ಜನ ಮನೆಯಲ್ಲಿ ತಾಯಿಯೊಂದಿಗೆ ನೆಲೆಸಿದ್ದ ಒಂದು ವರ್ಷದ ಮಗು ಜೂ.18ರಂದು ಕೇರಳದ ಇರಿಟ್ಟಿಗೆ ತಾಯಿಯೊಂದಿಗೆ ತೆರಳಿದ್ದು, ಜೂ.28ರಂದು ಮಗುವಿನ ಗಂಟಲು, ಮೂಗು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದಾಗಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಗುವನ್ನು ಕೇರಳದ ಕಣ್ಣೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಮಗುವಿನ ತಂದೆ ಮತ್ತು ತಾಯಿಯ ಪರೀಕ್ಷಾ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಈ ಪ್ರಕರಣದಲ್ಲಿ ಮಗು ನೆಲೆಸಿದ್ದ ಕೊಡಗಿನ ವೀರಾಜಪೇಟೆಯ ರಾಮನಗರದಲ್ಲಿರುವ ಮಗುವಿನ ತಾತನ ಮನೆಯ ಸದಸ್ಯರು ಪ್ರಾಥಮಿಕ ಸಂಪರ್ಕವಾಗಿದ್ದು, ಇವರ ಗಂಟಲು-ಮೂಗಿನ ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲು ಕ್ರಮ ವಹಿಸಲಾಗುತ್ತಿದೆ. ಈ ಎರಡೂ ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕದ ವ್ಯಕ್ತಿಗಳನ್ನು ಕಡ್ಡಾಯವಾಗಿ ಗೃಹ ಸಂಪರ್ಕ ತಡೆಯಲ್ಲಿರಲು ಸೂಚಿಸಲಾಗಿದ್ದು, ಆದ್ದರಿಂದ ಜಿಲ್ಲೆಯ ಸ್ಥಳೀಯ ಜನತೆ ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ ಎಂದು ಅನೀಸ್ ಕಣ್ಮಣಿ ಜಾಯ್ ಸ್ಪಷ್ಟಪಡಿಸಿದ್ದಾರೆ.

error: Content is protected !!