ಬಡವರ ಬಂಧು ಸಾಲ ಯೋಜನೆ : ಫಲಾನುಭವಿಗಳ ಆಯ್ಕೆ ಅಧಿಕಾರ ಡಿಸಿಸಿ ಬ್ಯಾಂಕ್‍ಗೆ : ಸಚಿವ ಸೋಮಶೇಖರ್

02/07/2020

ಮಡಿಕೇರಿ ಜು.2 : ಬಡವರ ಬಂಧು ಯೋಜನೆಯಡಿ ಸಾಲ ವಿತರಣೆ ಮಾಡಲು ಫಲಾನುಭವಿಗಳ ಆಯ್ಕೆ ಅಧಿಕಾರವನ್ನು ಆಯಾ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ಗೆ ನೀಡುವ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೊಡಗು ಡಿಸಿಸಿ ಬ್ಯಾಂಕ್‍ನ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಸಚಿವರು, ಬಡವರ ಬಂಧು ಯೋಜನೆಯಡಿ ಸಾಲ ವಿತರಣೆಗೆ ಫಲಾನುಭವಿಗಳ ಆಯ್ಕೆ ಸಮಿತಿಗೆ ಜಿಲ್ಲಾಧಿಕಾರಿಗಳನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಆದರೆ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸಾಕಷ್ಟು ಒತ್ತಡದ ಕೆಲಸಗಳಿರುತ್ತವೆ. ಹೀಗಾಗಿ ಹೊಸ ಆದೇಶದ ಬಗ್ಗೆ ಗಮನಹರಿಸಲಾಗುತ್ತದೆ. ಅಲ್ಲದೆ ಈ ಹಿಂದೆ ಇದ್ದಂತೆ ಫಲಾನುಭವಿಗಳ ಆಯ್ಕೆ ವಿಷಯದಲ್ಲಿ ಡಿಸಿಸಿ ಬ್ಯಾಂಕಿಗೂ ಅಧಿಕಾರ ನೀಡುವ ನಿಟ್ಟಿನಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಆಯಾ ಜಿಲ್ಲಾಧಿಕಾರಿಗಳೂ ಫಲಾನುಭವಿಗಳನ್ನು ಆಯ್ಕೆ ಮಾಡಲಿ, ಅಂತಿಮವಾಗಿ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಚರ್ಚಿಸಿ ನಿರ್ಧಾರ ಪ್ರಕಟಿಸಲಾಗುವುದು ಎಂದು ನುಡಿದರು.
ಸಾಲ ವಿತರಣೆ ಬಗ್ಗೆ ಮಾಹಿತಿ: ಇದೇ ವೇಳೆ ಡಿಸಿಸಿ ಬ್ಯಾಂಕ್‍ನಿಂದ ರೈತರಿಗೆ ಎಷ್ಟು ಸಾಲ ವಿತರಣೆ ಮಾಡಲಾಗಿದೆ, ಎಷ್ಟು ಹೊಸ ರೈತರಿಗೆ ಸಾಲ ನೀಡಲಾಗಿದೆ, ಬಡವರ ಬಂಧು ಹಾಗೂ ಕಾಯಕ ಯೋಜನೆಯಡಿ ಎಷ್ಟು ಸಾಲ ವಿತರಣೆಯಾಗಿದೆ? ಸಾಲ ವಿತರಣೆ ಹಾಗೂ ವಸೂಲಾತಿಯಲ್ಲಿ ಏನಾದರೂ ಸಮಸ್ಯೆಯಾಗಿದೆಯೇ ಎಂಬಿತ್ಯಾದಿ ವಿಷಯಗಳ ಬಗ್ಗೆ ಸಚಿವರು ಮಾಹಿತಿ ಪಡೆದರು.
ಈ ಸಂದರ್ಭ ಶಾಸಕ ಕೆ.ಜಿ. ಬೋಪಯ್ಯ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.