ಕಾಮೇಗೌಡರಿಗೆ ಜೀವಿತಾವಧಿ ಬಸ್ ಪಾಸ್

03/07/2020

ಬೆಂಗಳೂರು ಜು.3 : ಕೆರೆಗಳನ್ನು ಕಟ್ಟಿಸಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಗಮನ ಸೆಳೆದಿರುವ ಮಂಡ್ಯದ ಕಾಮೇಗೌಡರಿಗೆ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲಾ ಬಸ್ಸುಗಳಲ್ಲಿ, “ಜೀವಿತಾವಧಿಯವರೆಗೂ” ಉಚಿತವಾಗಿ ಸಂಚರಿಸಲು ಬಸ್ ಪಾಸ್ ನೀಡಲಾಗಿದೆ.
ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಈ ವಿಷಯ ತಿಳಿಸಿದ್ದು, ಕಾಮೇಗೌಡರ ಕೋರಿಕೆಯನ್ನು ಸಂಸ್ಥೆ ಈಡೇರಿಸಿದೆ ಎಂದಿದ್ದಾರೆ.
ಈ ಮಧ್ಯೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮಾಡಿದ್ದು, ಅಪರೂಪದ ಪರಿಸರ ಕಾಳಜಿಯ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿ ಕಾಮೇಗೌಡರು ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಸಂಚರಿಸಬಹುದಾಗಿದೆ ಎಂದು ಹೇಳಿದ್ದಾರೆ.
ಅಲ್ಲದೇ ಉಚಿತ ಬಸ್ ಪಾಸ್ ಕಾರ್ಡ್ ಅನ್ನು ಟ್ವೀಟ್ ನಲ್ಲಿ ಯಡಿಯೂರಪ್ಪ ಹಂಚಿಕೊಂಡಿದ್ದಾರೆ. ಕಾಮೇಗೌಡರು ಸಾಮಾನ್ಯ, ವೇಗದೂತ, ರಾಜಹಂಸ, ವೋಲ್ವೋ ಸಹಿತ ಎಲ್ಲಾ ಬಗೆಯ ಬಸ್ ಗಳಲ್ಲಿ ಉಚಿತವಾಗಿ ಸಂಚರಿಸಬಹುದು ಎಂದಿದ್ದಾರೆ.