ತಿದ್ದುಪಡಿ ಕಾಯ್ದೆ ಜಾರಿಗೆ ಭಾಗಮಂಡಲ ರೈತ ಹೋರಾಟ ಸಮಿತಿ ಒತ್ತಾಯ

03/07/2020

ಮಡಿಕೇರಿ ಜು.3 : ಕೃಷಿಕರ ಹಿತ ದೃಷ್ಟಿಯಿಂದ ರಾಜ್ಯ ಸರ್ಕಾರ ರೂಪಿಸಿರುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ತಕ್ಷಣ ಜಾರಿಗೆ ತರಬೇಕೆಂದು ಭಾಗಮಂಡಲ ಹೋಬಳಿ ರೈತ ಹೋರಾಟ ಸಮಿತಿ ಒತ್ತಾಯಿಸಿದೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಕುದುಕುಳಿ ಭರತ್, ತಿದ್ದುಪಡಿಯಾಗಿರುವ ಕಾಯ್ದೆ ಜಾರಿಯಾದಲ್ಲಿ ಕೊಡಗಿನ ಕೃಷಿಕರ ಬದುಕು ಹಸನಾಗಬಹುದೆಂದು ಅಭಿಪ್ರಾಯಪಟ್ಟರು. ಜಿಲ್ಲೆಯ ರೈತರು ಹಾಗೂ ಬೆಳೆಗಾರರು ಪ್ರಾಕೃತಿಕ ವಿಕೋಪದ ಮತ್ತು ವನ್ಯ ಜೀವಿಗಳ ದಾಳಿಯಿಂದ ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸುತ್ತಿದ್ದಾರೆ. ಕೃಷಿಯಿಂದಲೇ ಬದುಕು ಕಟ್ಟಿಕೊಳ್ಳಲಾಗದೆ ಯುವ ಸಮೂಹ ದೇಶದ ವಿವಿಧೆಡೆ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಕೃಷಿ ಭೂಮಿ ಪಾಳು ಬಿದ್ದು, ಪರಿಸರವಾದಿಗಳ ನಿರೀಕ್ಷೆಯಂತೆ ಅವುಗಳು ವನ್ಯಜೀವಿಗಳ ನೆಲೆಯಾಗಿ ಮಾರ್ಪಡುವ ಬದಲು ಮಾರಾಟವಾಗಿ ರೈತನ ಕುಟುಂಬಕ್ಕೆ ನೆರವಾಗಲಿ ಎಂದರು.
ಕೊಡಗಿನ ಶೇ. 50 ರಷ್ಟು ಕೃಷಿಕರು ಹೊರ ಜಿಲ್ಲೆ, ರಾಜ್ಯ, ದೇಶಗಳಲ್ಲಿ ನೆಲೆಸಿ ಉದ್ಯೋಗ ಮತ್ತು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿರುವ ತಮ್ಮ ಜಮೀನಿನಿಂದ ಯಾವುದೇ ಆದಾಯ ಬಾರದೆ ಇರುವ ಕಾರಣ ಅದರ ಮೇಲೆ ಆಸಕ್ತಿಯನ್ನು ಕಳೆದುಕೊಂಡಿದ್ದಾರೆ. ಪ್ರಸ್ತುತ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆಯಿಂದ ಸಂಕಷ್ಟದಲ್ಲಿರುವ ಕೃಷಿಕರ ಜಮೀನು ಮಾರಾಟಕ್ಕೆ ಅನುಕೂಲವಾಗಲಿದ್ದು, ಸಮಸ್ಯೆಗಳಿಗೆ ಪರಿಹಾರವೂ ದೊರೆಯಲಿದೆ ಎಂದು ಭರತ್ ಅಭಿಪ್ರಾಯಪಟ್ಟರು.
ವನ್ಯಜೀವಿ ಉಪಟಳ, ಪ್ರಾಕೃತಿಕ ವಿಕೋಪ ಮಾತ್ರವಲ್ಲದೇ ಬಾಣೆ ಜಮೀನಿನ ಸಮಸ್ಯೆಯಿಂದಲೂ ಕೃಷಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಜಮೀನಿಗೆ ಸಂಬಂಧಿಸಿದ ಯಾವುದೇ ಕಡತಗಳು ಸುಲಭವಾಗಿ ವಿಲೇವಾರಿಯಾಗುತ್ತಿಲ್ಲ. ಸುಮಾರು 500 ವರ್ಷಗಳ ಹಿಂದಿನ ಕೊಡಗು ಅರಸರ ಕಾಲದ ಜಮ್ಮಾ, ಸಾಗು, ಉಂಬಳಿ, ನಾಯಿ ಮಣ್ಣು, ಬಟ್ಟಮಾನಿ ಹೀಗೆ 18 ಬಗೆಯ ಜಮೀನುಗಳಿದ್ದು, ಕಂದಾಯ ಇಲಾಖೆಯಲ್ಲಿ ಇದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ಕೃಷಿಕರಿಗೆ ಸಿಗುತ್ತಿಲ್ಲ. ಹಿಂದೆ “ಸಿ” ರಾಜ್ಯವಾಗಿದ್ದ ಕೊಡಗು 1956ರಲ್ಲಿ ಕರ್ನಾಟಕದೊಂದಿಗೆ ವಿಲೀನವಾಗಿಯೂ ಜಮೀನು ದಾಖಲೆಗಳು ಬದಲಾಗಲಿಲ್ಲ. ಕೊಡಗಿನ ಮೂಲ ದಾಖಲೆಗಳು ಬ್ರೀಟಿಷರ ಕಾಲದ ಮದ್ರಾಸಿನ ಪತ್ರಾಗಾರದಲ್ಲಿಟ್ಟು, ಇದು ಇಂದಿಗೂ ಕೃಷಿಕರಿಗೆ ಸಮಸ್ಯೆಯಾಗಿಯೇ ಉಳಿದಿದೆ.
ಕಂದಾಯ ಇಲಾಖೆಯ ಅಂತರ್ಜಾಲ ವ್ಯವಸ್ಥೆಯಲ್ಲಿ ಕೃಷಿ ಜಾಮೀನಿನ ದಾಖಲೆಗಳನ್ನು ಸಮರ್ಪಕವಾಗಿ ಅಳವಡಿಸಿಲ್ಲ. ಈ ಎಲ್ಲಾ ಸಮಸ್ಯೆಗಳು ನಿರಂತರವಾಗಿ ಕೊಡಗಿನ ಕೃಷಿಕರನ್ನು ಕಾಡುತ್ತಲೆ ಬಂದಿದೆ. ಆದ್ದರಿಂದ ರಾಜ್ಯ ಸರ್ಕಾರದ ನೂತನ ಭೂ ಸುಧಾರಣಾ ಕಾಯ್ದೆ ಸಂಕಷ್ಟದಲ್ಲಿರುವ ಕೃಷಿಕರಿಗೆ ಹೆಚ್ಚು ಅನುಕೂಲಕರವಾಗಿದೆ ಎಂದು ಭರತ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸಮಿತಿಯ ಪ್ರಮುಖರಾದ ದೇವಂಗೋಡಿ ಭಾಸ್ಕರ್, ಕುದುಪಜೆ ಪುರುಷೋತ್ತಮ ಹಾಗೂ ಕೆದಂಬಾಡಿ ಕೀರ್ತಿಕುಮಾರ್ ಉಪಸ್ಥಿತರಿದ್ದರು.