ಕಂಟೈನ್‍ಮೆಂಟ್ ವಲಯ : ನಿಯಮ ಪಾಲಿಸಲು ವಿರಾಜಪೇಟೆ ತಹಶೀಲ್ದಾರ್ ಸೂಚನೆ

03/07/2020

ಮಡಿಕೇರಿ ಜು.3 : ವಿರಾಜಪೇಟೆ ತಾಲ್ಲೂಕು ಅಮ್ಮತ್ತಿ ಹೋಬಳಿಯ ಚೆನ್ನಯ್ಯನಕೋಟೆ ಗ್ರಾಮದ ಹೊಲಮಾಳದಲ್ಲಿನ ವ್ಯಕ್ತಿಯೊಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಈ ಗ್ರಾಮದಲ್ಲಿ ಒಟ್ಟು 86 ಮನೆಗಳಿದ್ದು, 362 ಮಂದಿ ವಾಸಿಸುತ್ತಿದ್ದಾರೆ. ಈ ಪ್ರದೇಶವನ್ನು ಸರ್ಕಾರದ ನಿಯಮದಂತೆ ಸೀಲ್‍ಡೌನ್ ಮಾಡಿ ಕಂಟೈನ್‍ಮೆಂಟ್ ವಲಯವೆಂದು ಘೋಷಿಸಲಾಗಿದೆ ಎಂದು ವಿರಾಜಪೇಟೆ ತಹಶೀಲ್ದಾರ್ ನಂದೀಶ್ ಅವರು ತಿಳಿಸಿದ್ದಾರೆ.
ಈ ಪ್ರದೇಶದ ಸಾರ್ವಜನಿಕರು ಕಾಲ್ನಡಿಗೆ ಅಥವಾ ವಾಹನದ ಮೂಲಕ ಅಥವಾ ಇನ್ಯಾವುದೇ ರೀತಿಯಿಂದ ಈ ಪ್ರದೇಶದ ಒಳ ಪ್ರವೇಶ ಮತ್ತು ಹೊರ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸಿದೆ. ಈ ಕೋವಿಡ್-19 ನಿಗ್ರಹ ಸಂಬಂಧಿತ ಕರ್ತವ್ಯನಿರತ ಅಧಿಕಾರಿಗಳಿಗೆ ಮಾತ್ರ ತುರ್ತು ಮತ್ತು ಅಗತ್ಯ ಸೇವೆಗಳಿಗೆ ಸಂಬಂಧಿಸಿದಂತೆ ಸಂಚರಿಸಲು ಅವಕಾಶ ಇರುತ್ತದೆ. ಈ ನಿಷೇಧಿತ ಪ್ರದೇಶದ ಎಲ್ಲಾ ಕಚೇರಿಗಳು, ಅಂಗಡಿ ಮಳಿಗೆ, ದಾಸ್ತಾನು ಕೇಂದ್ರ, ಎಲ್ಲಾ ಅವಶ್ಯ ಮತ್ತು ತುರ್ತು ಸೇವೆಗಳನ್ನು ನೀಡುವ ಮಳಿಗೆಗಳನ್ನು ಮುಚ್ಚುವುದು. ಯಾವುದೇ ಅಗತ್ಯ ವಸ್ತುಗಳನ್ನು ಕಂದಾಯ ಪರಿವೀಕ್ಷಕರು ಅಮ್ಮತ್ತಿ ಹೋಬಳಿ ಇವರ ಮೂಲಕ ಪೂರೈಕೆ ಮಾಡುವುದು.
ಈ ಪ್ರದೇಶದಲ್ಲಿರುವ ಎಲ್ಲಾ ಮನೆಗಳಲ್ಲಿನ ಸದಸ್ಯರು ಅವರ ಮನೆ ಬಿಟ್ಟು ಹೊರಗಡೆ ತಿರುಗಾಡುವಂತಿಲ್ಲ ಮತ್ತು ಇತರರ ಮನೆಗಳಿಗೆ ಹೋಗುವಂತಿಲ್ಲ. ಈ ಪ್ರದೇಶದಲ್ಲಿರುವ ಎಲ್ಲಾ ಮನೆಗಳ ಸದಸ್ಯರು ಕಡ್ಡಾಯವಾಗಿ ಗೃಹ ಸಂಪರ್ಕ ತಡೆಯಲ್ಲಿರುವುದು. ಇಲ್ಲಿ ವಾಸಿಸುತ್ತಿರುವವರ ಆರೋಗ್ಯದ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಪ್ರತಿನಿತ್ಯ ಪರಿಶೀಲನೆ ನಡೆಸುವುದು, ತೀವ್ರ ನಿಗಾವಹಿಸುವುದು. ಈ ಪ್ರದೇಶದಲ್ಲಿ ಯಾವುದೇ ರೀತಿಯ ಕ್ರೀಡೆ, ಸಭೆ, ಸಮಾರಂಭ, ಮದುವೆ ಮುಂತಾದ ಜನ ಗುಂಪು ಸೇರುವಂತಹ ಎಲ್ಲಾ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಈ ಆದೇಶದ ಉಲ್ಲಂಘನೆಯು ಭಾರತೀಯ ದಂಡ ಸಂಹಿತೆ, ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಕಾಯ್ದೆ ಮತ್ತು ಸಂಬಂಧಿತ ಇತರೆ ಕಾಯ್ದೆಗಳಡಿ ದಂಡನೀಯವಾಗಿದ್ದು, ಕಡ್ಡಾಯವಾಗಿ ಪಾಲಿಸುವಂತೆ ವಿರಾಜಪೇಟೆ ತಾಲ್ಲೂಕು ತಹಶೀಲ್ದಾರ್ ಹಾಗೂ ಕಾರ್ಯನಿರ್ವಾಹಕ ದಂಡಾಧಿಕಾರಿ ನಂದೀಶ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.