ಕೊಡಗಿನಲ್ಲಿ ಸುಸೂತ್ರವಾಗಿ ಪೂರ್ಣಗೊಂಡ ಹತ್ತನೇ ತರಗತಿ ಪರೀಕ್ಷೆ

03/07/2020

ಮಡಿಕೇರಿ ಜು.3 : ಸರ್ಕಾರದ ಮಾರ್ಗಸೂಚಿಯಂತೆ ಕೊಡಗು ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಒಟ್ಟು 27 ಪರೀಕ್ಷಾ ಕೇಂದ್ರಗಳಲ್ಲಿ 7,164 ವಿದ್ಯಾರ್ಥಿಗಳು ಪರೀಕ್ಷೆ ಬರೆದಿರುತ್ತಾರೆ. ಜಿಲ್ಲೆಯಲ್ಲಿ ಕೋವಿಡ್-19 ರ ಸಂಬಂಧ ತೆರೆಯಲಾದ ನಿಯಂತ್ರಿತ ಪ್ರದೇಶಗಳಿಂದ 74 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಸಂದರ್ಭದಲ್ಲಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಪೋಷಕರ ಸಹಕಾರದಿಂದ ಜಿಲ್ಲೆಯಾದ್ಯಂತ ಎಸ್‍ಎಸ್‍ಎಲ್‍ಸಿ ಪರೀಕ್ಷೆಯು ಮುಕ್ತಾಯಗೊಂಡಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪಿ.ಎಸ್.ಮಚ್ಚಾಡೋ ಅವರು ಹೇಳಿದರು.
ರಾಜ್ಯಾದ್ಯಂತ ಜೂನ್ 25 ರಂದು ಆರಂಭಗೊಂಡಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯು ಜುಲೈ 3 ರಂದು ಮುಕ್ತಾಯಗೊಂಡಿದೆ ಎಂದರು.
ಜೂನ್ 25 ರಂದು ಇಂಗ್ಲೀಷ್ ಪರೀಕ್ಷೆ ನಡೆದಿದ್ದು 6,740 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದರು, ಈ ಪೈಕಿ 369 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು. ಅಲ್ಲದೇ ಕಂಟೈನ್‍ಮೆಂಟ್ ವಲಯದಿಂದ 49 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಜೂನ್ 27 ರಂದು ನಡೆದ ಗಣಿತ ಪರೀಕ್ಷೆಗೆ 7,164 ವಿದ್ಯಾರ್ಥಿಗಳು ನೋಂದಾಯಿತರಾಗಿದ್ದರೆ, 348 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಕಂಟೈನ್‍ಮೆಂಟ್ ವಲಯದಿಂದ 60 ವಿದ್ಯಾರ್ಥಿಗಳು ಇಂಗ್ಲೀಷ್ ಪರೀಕ್ಷೆ ಎದುರಿಸಿದ್ದರು. ಜೂನ್ 29 ರಂದು ವಿಜ್ಞಾನ ಪರೀಕ್ಷೆಗೆ 6,972 ವಿದ್ಯಾರ್ಥಿಗಳು ನೋಂದಾಯಿತರಾಗಿದ್ದರು. ಈ ಪೈಕಿ 374 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರೆ, ಕಂಟೈನ್‍ಮೆಂಟ್ ವಲಯದ 70 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಜುಲೈ 01 ರಂದು ಸಮಾಜ ವಿಜ್ಞಾನ ಪರೀಕ್ಷೆಗೆ 6,917 ವಿದ್ಯಾರ್ಥಿಗಳು ನೋಂದಾಯಿತರಾಗಿದ್ದು, ಈ ಪೈಕಿ 402 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಕಂಟೈನ್‍ಮೆಂಟ್ ವಲಯದಿಂದ 74 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಜು.02 ರಂದು ಕನ್ನಡ ಪರೀಕ್ಷೆಗೆ 6,805 ವಿದ್ಯಾರ್ಥಿಗಳು ನೋಂದಾಯಿತರಾಗಿದ್ದು, 405 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. 74 ವಿದ್ಯಾರ್ಥಿಗಳು ಕಂಟೈನ್‍ಮೆಂಟ್ ವಲಯದ ಪರೀಕ್ಷೆ ಬರೆದಿದ್ದಾರೆ. ಜು.3 ರಂದು ಅಂತಿಮ ಹಿಂದಿ ಪರೀಕ್ಷೆಗೆ 6,743 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿತರಾಗಿದ್ದರು. ಈ ಪೈಕಿ 405 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದು, 74 ಕಂಟೈನ್‍ಮೆಂಟ್ ವಲಯದ ವಿದ್ಯಾರ್ಥಿಗಳು ಯಶಸ್ವಿಯಾಗಿ ಪರೀಕ್ಷೆ ಬರೆದಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಪರೀಕ್ಷೆ ನಡೆದ ಪ್ರತಿ ದಿನವೂ ಸಹ ಮುಂಜಾನೆ 7:30 ಕ್ಕೆ ಸಿಬ್ಬಂದಿಗಳು ಪರೀಕ್ಷಾ ಕೇಂದ್ರದಲ್ಲಿ ಹಾಜರಿದ್ದರು. ಆರೋಗ್ಯ ಮತ್ತು ಪೆÇಲೀಸ್ ಇಲಾಖೆಯ ಸಹಕಾರದೊಂದಿಗೆ ಪ್ರತಿ ವಿದ್ಯಾರ್ಥಿಗೂ ಥರ್ಮಲ್ ಸ್ರ್ಕೀನಿಂಗ್ ನಡೆಸಿ, ಸ್ಯಾನಿಟೈಸರ್ ಒದಗಿಸಿದ ನಂತರ ಪರೀಕ್ಷಾ ಕೊಠಡಿಗೆ ಪ್ರವೇಶ ನೀಡಲಾಯಿತು.
ಪ್ರತಿ ವಿದ್ಯಾರ್ಥಿಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಮಾಸ್ಕ್ ನೀಡಲಾಗಿತ್ತು. ಈ ಪರೀಕ್ಷಾ ಸಂದರ್ಭದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಮನೆಯಿಂದಲೇ ಹ್ಯಾಂಡ್ ಸ್ಯಾನಿಟೈಸರ್ ಮತ್ತು ಕುಡಿಯುವ ನೀರಿನ ಬಾಟಲ್‍ಗಳನ್ನು ತಂದಿದ್ದರು. ಪರೀಕ್ಷಾ ಕೊಠಡಿಯೊಳಗೆ ಮತ್ತು ಥರ್ಮಲ್ ಸ್ಕ್ರೀನಿಂಗ್ ಸಂದರ್ಭ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು. ವಿದ್ಯಾರ್ಥಿಗಳು ಗುಂಪುಗೂಡದಂತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಧ್ವನಿ ವರ್ಧಕಗಳ ಮೂಲಕ ಪ್ರತೀ ಪರೀಕ್ಷೆ ಆರಂಭಕ್ಕೂ ಮುನ್ನ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗುತ್ತಿತ್ತು. ಜೊತೆಗೆ ಪರೀಕ್ಷೆಯ ನಂತರ ಪ್ರತಿ ಪರೀಕ್ಷಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿತ್ತು. ಕಂಟೈನ್‍ಮೆಂಟ್ ವಲಯದಿಂದ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ನಡೆಸಲಾಗಿದೆ. ಯಾವುದೇ ಗೊಂದಲಗಳಿಲ್ಲದೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸುಸೂತ್ರವಾಗಿ ನಡೆದಿದೆ ಎಂದು ಡಿಡಿಪಿಐ ಪಿ.ಎಸ್ ಮಚ್ಚಾಡೋ ಅವರು ತಿಳಿಸಿದರು.
ಇದರೊಂದಿಗೆ ಕಂಟೈನ್‍ಮೆಂಟ್ ವಲಯದಿಂದ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಎನ್-95 ಮಾಸ್ಕ್‍ನ್ನು ನೀಡಲಾಗಿತ್ತು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ ಸಿಇಒ ಕೆ.ಲಕ್ಷ್ಮೀ ಪ್ರಿಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ವರ್ಗಾಯಿತ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೇಕರ್, ತಾಲೂಕು ಪಂಚಾಯತ್ ಇಒಗಳು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು, ಗ್ರಾ.ಪಂ ಪಿಡಿಒಗಳ ಸಹಕಾರದಿಂದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಸುಸೂತ್ರವಾಗಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆದಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಪಿ.ಎಸ್ ಮಚ್ಚಾಡೋ ಅವರು ತಿಳಿಸಿದರು.