ವಿವಿಧ ಬೇಡಿಕೆಗಳ ಈಡೇರಿಕೆಗೆ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಆಗ್ರಹ

03/07/2020

ಮಡಿಕೇರಿ ಜು. 3 : ಕೊರೋನ ಹಿಮ್ಮೆಟ್ಟಿಸಲು ಸುರಕ್ಷತಾ ಕ್ರಮಗಳನ್ನು ವಹಿಸುವಂತೆ ಹಾಗೂ ಜನರ ಜೀವ ಮತ್ತು ಜೀವನದ ಹಕ್ಕಿಗಾಗಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಐಎನ್‍ಟಿಯುಸಿ, ಸಿಐಟಿಯು ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳು ನಗರದಲ್ಲಿ ಪ್ರತಿಭಟನೆ ನಡೆಸಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕಾರ್ಮಿಕ ಮುಖಂಡರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಕಾರ್ಮಿಕ ಮುಖಂಡ ಪಿ.ಆರ್. ಭರತ್, ಕಾರ್ಮಿಕರಿಗೆ ಲಾಕ್‍ಡೌನ್ ಕಾಲಾವಧಿಯ ಪೂರ್ಣ ವೇತನ ನೀಡಬೇಕು, ಕಾರ್ಮಿಕರ ಕಾನೂನನ್ನು ತಿದ್ದುಪಡಿ ಮಾಡಬಾರದು, ಕೊರೋನಾ ವಾರಿಯರ್ಸ್‍ಗಳ ಸುರಕ್ಷತೆ ಹಾಗೂ ಅವರ ಕೆಲಸ ಖಾಯಂ ಗೊಳಿಸಬೇಕು, ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಕುಟಂಬಕ್ಕೆ ಆರು ತಿಂಗಳ ಮಾಸಿಕ ರೂ. 7,500 ನಗದು ವರ್ಗಾವಣೆ ಮಾಡಬೇಕು, ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕೂಲಿಯನ್ನು ಹೆಚ್ಚಳಮಾಡಿ ಕೆಲಸವನ್ನು 200 ದಿನಗಳಿಗೆ ಹೆಚ್ಚಿಸಬೇಕು. ಅಂಗನವಾಡಿ, ಆಶಾ, ಬಿಸಿಯೂಟ ಮತ್ತಿತರೆ ಸ್ಕೀಂ ನೌಕರರ ಕೆಲಸವನ್ನು ಖಾಯಂ ಮಾಡಿ ವೇತನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಗ್ರಾ. ಪಂ. ನೌಕರರ ಕೆಲಸ ಖಾಯಂ ಮಾಡಿ ಬಾಕಿ ಸಹಿತ ವೇತನ ನೀಡಬೇಕು, ಕೆಲಸದ ಪುನರ್ ವಿಮರ್ಶಾ ಸಮಿತಿ ರದ್ದು ಮಾಡಬೇಕು, ಗುತ್ತಿಗೆ ಹೊರಗುತ್ತಿಗೆ ನೌಕರರನ್ನು ಖಾಯಂ ಮಾಡಬೇಕು, ತೋಟ ಕಾರ್ಮಿಕ ಕಲ್ಯಾಣ ಮಂಡಳಿ ರಚಿಸಬೇಕು, ಕಾರ್ಮಿಕ ಕೂಲಿ ಹೆಚ್ಚಳ ಮಾಡಿ ಉಚಿತ ವಸತಿ ನಿವೇಶನ ನೀಡಬೇಕು, ಸರ್ಕಾರಿ ನೌಕರರಿಗೆ ಹಾಗೂ ಪಿಂಚಣಿದಾರರ ತುಟ್ಟಿಭತ್ಯೆ ಕಡಿತ ರದ್ದುಪಡಿಸಬೇಕು, ಎನ್‍ಪಿಎಸ್ ರದ್ದುಪಡಿಸಿ ನಿಶ್ಚಿತ ಪಿಂಚಣಿಯನ್ನು ಮರುಸ್ಥಾಪಿಸಬೇಕು, ಸಾರ್ವಜನಿಕರ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸಬೇಕು, ಸಾರ್ವಜನಿಕರ ಆಸ್ತಿಯ ಲೂಟಿಗೆ ಖಾಸಗಿ ಬಂಡವಾಳಿಗರಿಗೆ ಅವಕಾಶ ನೀಡಬಾರದು, ಪ್ರತಿ ವ್ಯಕ್ತಿಗೆ ಆರು ತಿಂಗಳವರೆಗೆ ತಲಾ 10 ಕೆಜಿ ಧಾನ್ಯವನ್ನು ಉಚಿತವಾಗಿ ನಿಡಬೇಕು, ರೈತ ವಿರೋಧಿಯಾಗಿರುವ ಭೂಮಿ ಮತ್ತು ಕೃಷಿ ಶಾಸನಗಳ ತಿದ್ದುಪಡಿ ಕೈಬಿಡಬೇಕು, ವಿದ್ಯುತ್ ತಿದ್ದುಪಡಿ ಮಸೂದೆ 2020 ಅನ್ನು ಕೈಬಿಡಬೇಕು ಹಾಗೂ ವಿದ್ಯುತ್ ಕ್ಷೇತ್ರ ಖಾಸಗೀಕರಣ ನಿಲ್ಲಿಸಬೇಕು, ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯನ್ನು ಕೈಬಿಡಬೇಕು, ಕೊವೀಡ್-19 ಅನ್ನು ತುರ್ತು ಪರಿಸ್ಥಿತಿ ಎಂದು ಪರಿಗಣಿಸಬೇಕು, ಕೊರೋನಾ ಸೋಂಕಿತರಿಗೆ ಸರ್ಕಾರವೇ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭ ಸಿಐಟಿಯು, ಐಎನ್‌ಟಿಯುಸಿ ಪದಾಧಿಕಾರಿಗಳು, ಕಾರ್ಮಿಕ ಸಂಘಟನೆಯ ಮುಖಂಡರು ಇದ್ದರು.