ಸೋಮವಾರಪೇಟೆಯಲ್ಲಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ

03/07/2020

ಸೋಮವಾರಪೇಟೆ ಜು.3 : ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಜನವಿರೋಧಿ ನೀತಿಯನ್ನು ಅನುಸರಿಸುತ್ತಿವೆ ಎಂದು ಆರೋಪಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ(ಜೆಸಿಟಿಯು) ಸೋಮವಾರಪೇಟೆ ಘಟಕದ ಪದಾಧಿಕಾರಿಗಳು ತಾಲೂಕು ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಕರೊನಾ ಸೇನಾನಿಗಳ ಸುರಕ್ಷತೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು. ಆಶಾ, ಅಂಗನವಾಡಿ, ಬಿಸಿಯೂಟ ಹಾಗು ಸ್ಕೀಂ ನೌಕರರ ಕೆಲಸವನ್ನು ಖಾಯಂ ಮಾಡಿ ವೇತನ ಹೆಚ್ಚಳ ಮಾಡಬೇಕು. ಬಂಡವಾಳಶಾಹಿಗಳ ಪರವಾಗಿ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಲಾಗಿದ್ದು, ಕಾರ್ಮಿಕರ ಹಕ್ಕುಗಳನ್ನು ರಕ್ಷಣೆ ಮಾಡಬೇಕು. ಆದಾಯ ತೆರಿಗೆಯಿಂದ ಹೊರಗಿರುವ ಪ್ರತಿ ಕುಟುಂಬಕ್ಕೆ ಆರು ತಿಂಗಳ ವರೆಗೆ ಮಾಸಿಕ ರೂ.7500ರೂ.ಗಳನ್ನು ನೇರ ನಗದು ವರ್ಗಾವಣೆ ಮಾಡಬೇಕು. ರೈತ ವಿರೋಧಿಯಾಗಿರುವ ಭೂಮಿ ಮತ್ತು ಕೃಷಿ ಶಾಸನಗಳ ತಿದ್ದುಪಡಿಯನ್ನು ಕೈ ಬಿಡಬೇಕು. ಸಾರ್ವಜನಿಕ ಉದ್ದಿಮೆಗಳು, ವಿದ್ಯುತ್ ಕ್ಷೇತ್ರ ಖಾಸಗೀಕರಣವನ್ನು ಕೂಡಲೆ ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಇಂಧನ ಮೇಲಿನ ಶುಲ್ಕವನ್ನು ಕಡಿಮೆ ಮಾಡಬೇಕು. ಕೋವಿಡ್-19ನ್ನು ವೈದ್ಯಕೀಯ ತುರ್ತುಪರಿಸ್ಥಿತಿ ಎಂದು ಪರಿಗಣಿಸಿ, ಸರ್ಕಾರವೇ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಬೇಕು ಎಂಬ ವಿವಿಧ ಬೇಡಿಕೆಗಳ ಪಟ್ಟಿಯನ್ನು ತಹಸೀಲ್ದಾರ್ ಗೋವಿಂದರಾಜು ಮೂಲಕ ಪ್ರಧಾನ ಮಂತ್ರಿಗಳು ಹಾಗು ಮುಖ್ಯಮಂತ್ರಿಗಳಿಗೆ ಕಳುಹಿಸಲಾಯಿತು.
ಪ್ರತಿಭಟನೆಯಲ್ಲಿ ಐಎನ್‍ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ, ಎಐಟಿಯುಸಿ ಜಿಲ್ಲಾಧ್ಯಕ್ಷ ಎಚ್.ಎಂ.ಸೋಮಪ್ಪ, ಸಿಐಟಿಯು ಜಿಲ್ಲಾಧ್ಯಕ್ಷ ಪಿ.ಆರ್.ಭರತ್, ಬಿಸಿಯೂಟ ಕಾರ್ಯಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷೆ ಕಾವೇರಿ, ಐಎನ್‍ಟಿಯುಸಿ ಜಿಲ್ಲಾಧ್ಯಕ್ಷ ಹಮೀದ್, ಉಪಾಧ್ಯಕ್ಷ ಕಿಶೋರ್ ಮತ್ತಿತರ ಮುಖಂಡರು ಇದ್ದರು.