ಕೆಪಿಸಿಸಿ ನೂತನ ಅಧ್ಯಕ್ಷರ ಪದಸ್ವೀಕಾರ: ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ಪ್ರತೀಕ- ಕಾಂಗ್ರೆಸ್ ಮುಖಂಡ ಅರುಣ್ ಮಾಚಯ್ಯ ಅಭಿಪ್ರಾಯ

04/07/2020

ಪೊನ್ನಂಪೇಟೆ, ಜು. 4 : ಶತಮಾನಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಜನಸಮುದಾಯದ ರಾಜಕೀಯ ಪ್ರತಿನಿಧಿಯಾಗಿ ಇಡೀ ದೇಶದಲ್ಲಿ ಗುರುತಿಸಲ್ಪಟ್ಟಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸರಕಾರದ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಸಮಾನ ಹಕ್ಕುದಾರ ಎಂದು ಕಾಂಗ್ರೆಸ್ ಪಕ್ಷ ದೇಶಕ್ಕೆ ತೋರಿಸಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ಪ್ರತೀಕ ಎಂದು ವಿಧಾನ ಪರಿಷತ್ ಮಾಜಿ ಸದಸ್ಯರಾದ ಕಾಂಗ್ರೆಸ್ ಮುಖಂಡ ಚೆಪ್ಪುಡೀರ ಎಸ್.ಅರುಣ್ ಮಾಚಯ್ಯ ಹೇಳಿದ್ದಾರೆ.

ಮಾಯಮುಡಿ ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಕೆಪಿಸಿಸಿ ನೂತನ ಅಧ್ಯಕ್ಷರ ಪದಸ್ವೀಕಾರ ಸಮಾರಂಭದ ‘ನೇರಪ್ರಸಾರ ವೀಕ್ಷಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಯಾವುದೇ ಒಂದು ಸೀಮಿತ ಸಮುದಾಯಕ್ಕೆ ಮಾತ್ರ ಸೇರಿದ ಆಸ್ತಿಯಲ್ಲ. ಮತ್ತೊಂದು ಧರ್ಮವನ್ನು ದ್ವೇಷಿಸುತ್ತಲೇ ಅಧಿಕಾರ ಅನುಭವಿಸಿದ ರಾಜಕೀಯ ಪಕ್ಷವೂ ಅಲ್ಲ. ದೇಶದ ಸ್ವಾತಂತ್ರ್ಯ ಸಂಗ್ರಾಮವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುನ್ನಡೆಸಿದ ಮಹಾತ್ಮ ಗಾಂಧಿ ಅವರು ಪ್ರತಿನಿಧಿಸಿದ ಕಾಂಗ್ರೆಸ್ ಪಕ್ಷವನ್ನು ಬೇರೆ ಯಾವುದೇ ರಾಜಕೀಯ ಪಕ್ಷಗಳು ಎಷ್ಟೇ ಪ್ರತಿರೋಧಿಸಿದರೂ ಜನರ ಮನಸ್ಸಿನಿಂದ ಕಿತ್ತೊಗೆಯಲು ಯಾರಿಗೂ ಸಾಧ್ಯವಿಲ್ಲ. ಕಾಂಗ್ರೆಸ್ಸಿನ ತತ್ವ-ಸಿದ್ಧಾಂತ ಒಂದು ವರ್ಗಕ್ಕೆ ಮತ್ತು ಒಂದು ಧರ್ಮಕ್ಕೆ ಸೀಮಿತವಾಗದೆ ದೇಶದ ಎಲ್ಲಾ ಸಮುದಾಯದವರು ಒಪ್ಪಬಹುದಾದ ಸ್ವೀಕಾರಯೋಗ್ಯವಾದದ್ದು. ಜನರ ವಿಶ್ವಾಸವೇ ಕಾಂಗ್ರೆಸ್ ಪಕ್ಷದ ಜೀವಾಳ ಎಂದು ಅರುಣ್ ಮಾಚಯ್ಯ ಬಣ್ಣಿಸಿದರು.

ಕೆಪಿಸಿಸಿ ಅಧ್ಯಕ್ಷರಾಗಿ ಇದೀಗ ಹಿರಿಯ ಮುಖಂಡರಾದ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಮಾಹಿತಿ ತಂತ್ರಜ್ಞಾನದ ಮೂಲಕ ಯುವ ಸಮೂಹವನ್ನು ತಲುಪುವ ನೂತನ ಅಧ್ಯಕ್ಷರ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಸಾಮಾಜಿಕ ಜಾಲತಾಣಗಳ ಮೂಲಕ ಸದಾ ಸುಳ್ಳನ್ನೇ ಪಸರಿಸುತ್ತಾ ಜನರಿಗೆ ಮಂಕುಬೂದಿ ಎರಚುತ್ತಿರುವ ಕೆಲ ರಾಜಕೀಯ ಪಕ್ಷಗಳ ನಾಗಾಲೋಟದ ನಡುವೆ ಜನರಿಗೆ ಅದೇ ಮಾಹಿತಿ ತಂತ್ರಜ್ಞಾನದ ಮೂಲಕ ನೈಜತೆಯನ್ನು ತಿಳಿಸುವುದು ಕಾಂಗ್ರೆಸ್ ಪಕ್ಷದ ಉದ್ದೇಶವಾಗಿದೆ ಎಂದು ಹೇಳಿದ ಅರುಣ್ ಮಾಚಯ್ಯ ಅವರು, ಡಿ.ಕೆ.ಶಿವಕುಮಾರ್ ಅವರ ವಿನೂತನ ಪ್ರಯತ್ನದಿಂದ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿದೆ. ಇಂದಿನಿಂದ ಕಾಂಗ್ರೆಸ್ ಪಕ್ಷದ ಸಂಘಟನೆ ಹೊಸ ದಿಕ್ಕಿನತ್ತ ಸಾಗಲಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಎನ್.ಪ್ರತ್ಯು, ಬಿಜೆಪಿಯವರು ಮಾಹಿತಿ ತಂತ್ರಜ್ಞಾನಗಳನ್ನು ಬಳಸಿಕೊಂಡು ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಆದರೆ ಅವರು ಹೇಳುತ್ತಿರುವುದು ಸುಳ್ಳು ಎಂಬುದನ್ನು ವಿನೂತನ ಪ್ರಯತ್ನದ ಮೂಲಕ ಜನತೆಗೆ ತಿಳಿಸುವ ಕೆಲಸವನ್ನು ಕಾಂಗ್ರೆಸ್ ಮಾಡಲು ಹೊರಟಿರುವುದು ರಾಜ್ಯದ ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಹೊಸ ಪ್ರಯೋಗವಾಗಿದೆ. ಕಾಂಗ್ರೆಸಿನ ಈ ಪ್ರಯತ್ನದಿಂದ ಬಿಜೆಪಿಯವರ ನಿಜರೂಪದ ಬಂಡವಾಳ ಜನತೆಯೆದುರು ಬಯಲಾಗಲಿದೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಎ.ಎಸ್.ಟಾಟು ಮೊಣ್ಣಪ್ಪ ಅವರು ಮಾತನಾಡಿ, ಕಾಂಗ್ರೆಸ್ಸಿನ ಸುದೀರ್ಘ ವರ್ಷಗಳ ಇತಿಹಾಸವನ್ನು ಸಹಿಸದ ಕಾಂಗ್ರೆಸ್ ವಿರೋಧಿಗಳು ‘ಕಾಂಗ್ರೆಸ್ ಮುಕ್ತ ಕರ್ನಾಟಕ’ವನ್ನಾಗಿಸುವ ಭ್ರಮೆಯಲ್ಲಿ ಹಗಲು ಕನಸು ಕಾಣುತ್ತಿದ್ದರು. ಆದರೆ ಇದೀಗ ಅದರ ಪರಿಣಾಮವನ್ನು ಅವರೇ ಅನುಭವಿಸುತ್ತಿದ್ದಾರೆ. ಇವರು ಭ್ರಮಿಸಿಕೊಂಡಂತೆ ಕಾಂಗ್ರೆಸ್ಸನ್ನು ನಾಶಮಾಡಲು ಇದು ದಿಡೀರ್ ಆಗಿ ಹುಟ್ಟಿಕೊಂಡ ರಾಜಕೀಯ ಪಕ್ಷವಲ್ಲ. ಸಾವಿರಾರು ನಾಯಕರು ಮತ್ತು ಕೋಟ್ಯಾಂತರ ಕಾರ್ಯಕರ್ತರ ಪರಿಶ್ರಮದಿಂದ ನೂರಾರು ವರ್ಷಗಳಿಂದ ಬೆಳೆದು ಬಂದ ಕಾಂಗ್ರೆಸ್ ಅನ್ನು ಯಾವುದೇ ಶಕ್ತಿಗಳಿಂದ ನಾಶಗೊಳಿಸಲು ಸಾಧ್ಯವೇ ಇಲ್ಲ ಎಂದು ದೃಢ ನುಡಿಗಳನ್ನಾಡಿದರು.

ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡ ಸಣ್ಣುವಂಡ ಎಂ. ವಿಶ್ವನಾಥ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಂಗಳೂರು ಕೆಪಿಸಿಸಿ ಆಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇರ ಪ್ರಸಾರದ ಮೂಲಕ ಬೋಧಿಸಿದ ದೇಶದ ಸಂವಿಧಾನದ ಪೀಠಿಕೆ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸುವ ಕುರಿತ ಪ್ರತಿಜ್ಞಾ ವಿಧಿಯನ್ನು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಸ್ವೀಕರಿಸಿದರು.

ಮಾಯಮುಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಸಿ.ಕೆ. ಚಿಣ್ಣಪ್ಪ, ಕಾಂಗ್ರೆಸ್ ಮುಖಂಡ ಮತ್ತು ರೈತ ನಾಯಕ ಪುಚ್ಚಿಮಾಡ ರಾಯಿ ಮಾದಪ್ಪ, ಮಾಯಮುಡಿ ವಿ.ಎಸ್.ಎಸ್.ಎನ್ ನಿರ್ದೇಶಕರಾದ ರಮೇಶ್ ಮಾಯಮುಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಬಿ. ಮಂಜುಳಾ, ಗ್ರಾಮ ಪಂಚಾಯತಿ ಸದಸ್ಯರಾದ ಎ.ಎಸ್. ನಾಚಯ್ಯ, ಶಬರೀಶ್, ಗೌರಿ ರಾಮು, ಶಾಂತ, ಮಣಿಕುಂಜ್ಹ, ರುಕ್ಮಣಿ ಸುಂದರ, ಪೊನ್ನಂಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಕೊಣಿಯಂಡ ಮುತ್ತಣ್ಣ ಸೇರಿದಂತೆ ಮಾಯಮುಡಿ ವಲಯದ ನೂರಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ
ಕೆಪಿಸಿಸಿ ನೂತನ ಅಧ್ಯಕ್ಷರ ಪದಸ್ವೀಕಾರ ಸಮಾರಂಭವನ್ನು ನೇರ ಪ್ರಸಾರದ ಮೂಲಕ ಕಣ್ತುಂಬಿಕೊಂಡರು.