ಮಡಿಕೇರಿಯಲ್ಲಿ ಜು. 7 ರಿಂದ ಸಾಮೂಹಿಕ ನಮಾಝ್ ಪ್ರಾರಂಭ

04/07/2020

ಮಡಿಕೇರಿ ಜು. 4 : ನಗರದ ಮಸೀದಿಗಳಲ್ಲಿ ಜು. 7 ರಿಂದ ಸಾಮೂಹಿಕ ನಮಾಝ್ ಪ್ರಾರಂಭವಾಗಲಿದ್ದು, ಮಸೀದಿಗೆ ಆಗಮಿಸುವವರು ಎಲ್ಲಾ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಮಡಿಕೇರಿ ಜಮಾಅತ್ ಒಕ್ಕೂಟ ಮನವಿ ಮಾಡಿದೆ.

ಇತ್ತೀಚಿಗೆ ನಗರ ಕ್ರೆಸೆಂಟ್ ಶಾಲಾ ಸಭಾಂಗಣದಲ್ಲಿ ನಡೆದ ಮಡಿಕೇರಿ ಜಮಾಅತ್ ಒಕ್ಕೂಟದ ಸಭೆಯಲ್ಲಿ ತೀರ್ಮಾನ ಕೈಗೊಂಡು ಕೋವಿಡ್ 19 ಪರಿಣಾಮದಿಂದ ಸಾಮೂಹಿಕ ಪ್ರಾರ್ಥನೆಗಳನ್ನು ನಿಲ್ಲಿಸಲಾಗಿತ್ತು. ಇದೀಗ ಜು. 7 ರಂದು ಸಾಮೂಹಿಕ ನಮಾಝ್‍ಗಾಗಿ ಮಸೀದಿಗಳನ್ನು ತೆರೆಯಲು ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಸರಕಾರದ ಆದೇಶದಂತೆ ಎಲ್ಲಾ ಸುರಕ್ಷತಾ ನಿಯಮಗಳನ್ನು ಪಾಲಿಸಲು ಕರೆ ನೀಡಿದೆ.
ಅದರಂತೆ ಮಸೀದಿಗೆ ಆಗಮಿಸುವವರು ಕಡ್ಡಾಯವಾಗಿ ಮಾಸ್ಕ್ ದರಿಸಿರಬೇಕು, ಮನೆಯಲ್ಲೇ ವುಝೂ ಮಾಡಿ ಬರಬೇಕು, ಅಝಾನಿಗಿಂತ 10 ನಿಮಿಷ ಮುಂಚೆ ಮಸೀದಿಯ ಗೇಟ್ ತೆರೆಯಲಾಗುವುದು, ಅಝಾನ್ ಆದ ಕೂಡಲೇ ಮುಚ್ಚಲಾಗುವುದು,(ನಂತರ ಬರುವವರಿಗೆ ಯಾವುದೇ ಪ್ರವೇಶ ಇರುವುದಿಲ್ಲ, ನಮಾಝ್‍ಗೆ ಬರುವಾಗ ಮನೆಯಿಂದ ಮುಸಲ್ಲಗಳನ್ನು ತರಬೇಕು, ಮಸೀದಿಯ ಶೌಚಾಲಯಗಳನ್ನು ಉಪಯೋಗಿಸುವಂತಿಲ್ಲ, ಊರಿನ ಪರಿಚಿತರಿಗೆ ಮಾತ್ರ ಮಸೀದಿ ಪ್ರವೇಶಿಸಲು ಅವಕಾಶ, ನಮಾಝ್‍ನಲ್ಲಿ ಸಾಮಾಜಿಕ ಅಂತರವನ್ನು ಪಾಲಿಸಬೇಕು, ವೃದ್ದರು, ಸಣ್ಣ ಮಕ್ಕಳು, ರೋಗಿಗಳು, ನಮಾಝ್‍ನಲ್ಲಿ ಭಾಗವಹಿಸುವಂತಿಲ್ಲ.
ಮಸೀದಿಯಲ್ಲಿ ಫರ್ಝ್ ನಮಾಝ್ ನಿರ್ವಹಿಸಲು ಮಾತ್ರ ಅವಕಾಶ ನೀಡಲಾಗುವುದು, ಮಸೀದಿಯ ಗೋಡೆ, ಕಂಬ, ಸ್ವಿಚ್‍ಗಳನ್ನು ಮುಟ್ಟುವಂತಿಲ್ಲ, ಆಲಿಂಗನ ಮತ್ತು ಹಸ್ತಲಾಘವ ಮಾಡಬಾರದು, ಪ್ರಾರ್ಥನೆ ಮುಗಿದ ಕೂಡಲೇ ಮಸೀದಿ ಆವರಣದಿಂದ ನಿರ್ಗಮಿಸಬೇಕು, ಮಸೀದಿ ವಠಾರ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು, ವಿದೇಶದಿಂದ ಅಥವಾ ಹೊರ ರಾಜ್ಯದಿಂದ, ಬಂದು ಹೋಂ ಕ್ವಾರೆಂಟೈನ್ ನಲ್ಲಿರುವವರು ಕ್ವಾರೆಂಟೈನ್ ಸಮಯ ಮುಗಿಯುವ ವರೆಗೆ ಮಸೀದಿಗೆ ಬರುವಂತಿಲ್ಲ. ಪ್ರತಿಯೊಬ್ಬರು ಸರ್ಕಾರದ ನಿಯಮ ಪಾಲಿಸುವಂತೆ ಒಕ್ಕೂಟ ಮನವಿ ಮಾಡಿದೆ.