ಎಸ್‍ಎಸ್‍ಎಲ್‍ಸಿ ಪರೀಕ್ಷೆ : ವಿವಿಧ ಇಲಾಖೆಯ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ ಶಿಕ್ಷಣಾಧಿಕಾರಿ ಪಿ.ಎಸ್ ಮಚ್ಚಾಡೋ

04/07/2020

ಮಡಿಕೇರಿ ಜು.4 : ಮನುಷ್ಯ ಮಾನಸಿಕವಾಗಿ ಸಿದ್ಧನಾದರೆ ಎಂತಹ ಕಠಿಣ ಪರಿಸ್ಥಿತಿಯನ್ನು ಕೂಡ ಕಲಾತ್ಮಕವಾಗಿ ವೈಜ್ಞಾನಿಕವಾಗಿ ಹೇಗೆ ಎದುರಿಸಬಹುದು ಎಂಬುದಕ್ಕೆ ಕರ್ನಾಟಕ ರಾಜ್ಯದ ಎಸ್.ಎಸ್.ಎಲ್.ಸಿ ಪರೀಕ್ಷೆ ಒಂದು ಉದಾಹರಣೆಯಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪಿ.ಎಸ್ ಮಚ್ಚಾಡೋ ಅವರು ತಿಳಿಸಿದ್ದಾರೆ.
2019-20ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯನ್ನು ಮಾರ್ಚ್ 27 ರಿಂದ ನಡೆಸಲು ಕರ್ನಾಟಕ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತೀರ್ಮಾನಿಸಿತ್ತು. ಆದರೆ ಕೊರೊನಾ ತೀವ್ರವಾಗಿ ಹರಡುತ್ತಿರುವ ಕಾರಣ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬೇಕು ಅಥವಾ ಬೇಡ ಎನ್ನುವ ಬಗ್ಗೆ ತೀವ್ರತರವಾದ ಚರ್ಚೆ ನಡೆದು ಕೊನೆಗೆ ರಾಜ್ಯ ಉಚ್ಚನ್ಯಾಯಾಲಯದ ಆದೇಶದಂತೆ ಮೇ 27 ರಂದು ಮಂಡಳಿ ಹೊರಡಿಸಿರುವ ಪ್ರಾಮಾಣಿಕ ಕಾರ್ಯಾಚರಣಾ ವಿಧಾನ (Sಣಚಿಟಿಜಚಿಡಿಜ ಔಠಿeಡಿಚಿಣiಟಿg Pಡಿoಛಿeಜuಡಿe) ಅನ್ವಯ ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಕಾಪಾಡಿಕೊಂಡು ಪರೀಕ್ಷೆಯನ್ನು ನಿಗದಿತ ವೇಳಾಪಟ್ಟಿಯಂತೆ ಸುಲಲಿತವಾಗಿ ನಡೆಸಲು ಆದೇಶಿಸಿತ್ತು.
ಸರ್ವೋಚ್ಛ ನ್ಯಾಯಾಲಯವು ಇದಕ್ಕೆ ಒಪ್ಪಿಗೆ ಸೂಚಿಸಿತ್ತು. ಜೂನ್ 25 ರಿಂದ ಜುಲೈ 04 ರವರೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಯಿತು. ಅದರಂತೆ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಪೋಲಿಸ್ ವರಿಷ್ಠಾಧಿಕಾರಿಗಳು, ಡಯಟ್ ಪ್ರಾಂಶುಪಾಲರು ಮತ್ತು ಉಪನ್ಯಾಸಕರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳು, ಜಿಲ್ಲಾ ಮಟ್ಟದಲ್ಲಿ ವೀಕ್ಷಕರಾಗಿ ಆಗಮಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳು, ವಿಶೇಷವಾಗಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, 03 ತಾಲ್ಲೂಕಿನ ತಹಶೀಲ್ದಾರ್‍ಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಎಲ್ಲಾ ಪ್ರೌಢ ಮತ್ತು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ದೈಹಿಕ ಶಿಕ್ಷಕರು, ಮಾಸ್ಕ್ ನೀಡಿದಂತಹ ಮೊಬಿಯಸ್ ಸಂಸ್ಥೆ, ಲಯನ್ಸ್ ಸಂಸ್ಥೆ, ಎಲ್‍ಐಸಿ, ಆಶಾ ಕಾರ್ಯಕರ್ತೆಯರು, ಸ್ಕೌಟ್ಸ್ ಮತ್ತು ಗೈಡ್ಸ್, ಸ್ಕೌಟ್ಸ್ ಮಾಸ್ಟರ್ಸ್, ಗೈಡ್ಸ್ ಕ್ಯಾಪ್ಟನ್ಸ್, ರೇಂಜರ್ಸ್, ರೋವರ್ಸ್, ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಪರೀಕ್ಷಾ ಕೇಂದ್ರಗಳನ್ನು ಪ್ರತಿದಿನ ರೋಗಾಣು ಮುಕ್ತಗೊಳಿಸಲು ಸಹಕರಿಸಿದ ನಗರಸಭೆ, ಪಟ್ಟಣ ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿಗಳು, ವಿಶೇಷವಾಗಿ ಪರೀಕ್ಷಾ ಕೇಂದ್ರಗಳಿಗೆ ಪ್ರತಿ ದಿನ ಬೆಳಗ್ಗೆ 7.30 ಕ್ಕೆ ಕರ್ತವ್ಯಕ್ಕೆ ಆಗಮಿಸಿದ ಪೋಲಿಸ್ ಸಿಬ್ಬಂದಿಗಳು, ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು, ಇವರೆಲ್ಲರೂ ಹಗಲಿರುಳು ಅವಿರತವಾಗಿ ತಮ್ಮ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನಿಸದೆ ದುಡಿದ ಪರಿಣಾಮವಾಗಿ ಇಂದು ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಮುಕ್ತಾಯಗೊಳಿಸಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪಿ.ಎಸ್ ಮಚ್ಚಾಡೋ ಅವರು ಇಲಾಖೆಯ ಪರವಾಗಿ ಹಾಗೂ ವಿಶೇಷವಾಗಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.