ಕೊಡಗಿನ ಪುಣ್ಯಕ್ಷೇತ್ರ ತಲಕಾವೇರಿ

04/07/2020

ಕಾವೇರಿ ನೀ ಹರಿಯುವ ನದಿಯಲ್ಲ.. ಶೃಂಗಾರ ಲಹರಿ… ಎಂಬ ಕವಿಯ ಸಾಲುಗಳು ಅರ್ಥಪೂರ್ಣ. ಕರ್ನಾಟಕದ ಜೀವನದಿ ಕಾವೇರಿ ತಲಕಾವೇರಿಯಲ್ಲಿ ಹುಟ್ಟಿ, ಬಂಗಾಳಕೊಲ್ಲಿಯನ್ನು ಸೇರುವ ತನಕ ಕಾವೇರಿಯ ಚೆಲುವು ಶೃಂಗಾರ ಲಹರಿಯೇ. ಅಬ್ಬಿಯ ಅಂದಕ್ಕೆ, ಬೃಂದಾವನದ ಚೆಲುವಿಗೆ, ಶಿವನಸಮುದ್ರದ ಭರಚುಕ್ಕಿ, ಗಗನಚುಕ್ಕಿಯ ಸಂಭ್ರಮಕ್ಕೆ, ಹೊಗೆನಕಲ್ ಜಲಪಾತಕ್ಕೆ ಕಾರಣವಾಗುವ ಕಾವೇರಿಯ ಈ ಓಟದ ಬಗ್ಗೆ ಉದ್ಗ್ರಂಥವನ್ನೇ ಬರೆಯಬಹುದು.

ಕಾವೇರಿ ಹುಟ್ಟುವುದು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬ್ರಹ್ಮಗಿರಿ ಬೆಟ್ಟಶ್ರೇಣಿಯಲ್ಲಿ. ಕನ್ನಡನಾಡಿನ ಜೀವನದಿ ಕಾವೇರಿ ಹುಟ್ಟಿದ ಬಗ್ಗೆ ಪುರಾಣದಲ್ಲಿ ಒಂದು ಕಥೆ ಇದೆ. ಮಕ್ಕಳಿಲ್ಲದ ಕವೇರರಾಜ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದ. ಬ್ರಹ್ಮ ಕವೇರನ ತಪಸ್ಸಿಗೆ ಮೆಚ್ಚಿ ತನ್ನ ಸಾಕು ಮಗಳಾದ ಲೋಪಾಮುದ್ರೆಯನ್ನೇ ಮಗಳಾಗಿ ಅನುಗ್ರಹಿಸಿದ. ಕವೇರ ಪುತ್ರಿಯಾದ ಲೋಪಮುದ್ರೆ ಅಂದಿನಿಂದ ಕಾವೇರಿಯೆಂಬ ಹೆಸರು ಪಡೆದಳು.

ಪುರಾಣ ಹಿನ್ನೆಲೆ :

ಕಾವೇರಿ ತನ್ನ ಸಾಕು ತಂದೆ ಕವೇರನಿಗೆ ಮೋಕ್ಷ ದೊರಕಿಸಲು ಇಚ್ಛಿಸಿ, ತಾನು ನದಿಯಾಗಿ ಹರಿಯುವಂತೆ ಮತ್ತು ನದಿಯಲ್ಲಿ ಸ್ನಾನ ಮಾಡಿದವರು ತಮ್ಮ ಎಲ್ಲ ಪಾಪಗಳಿಂದ ಮುಕ್ತರಾಗುಂತೆ ವರವನ್ನು ಕೊಡಬೇಕೆಂದು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದಳು. ಬ್ರಹ್ಮ ತಥಾಸ್ತು ಎಂದ. ದೈವೇಚ್ಛೆಯಂತೆ ಕಾವೇರಿ ಅಗಸ್ತ್ಯ ಮಹಾಮುನಿಗಳನ್ನು ವರಿಸಿದಳು. ನದಿಯಾಗಿ ಹರಿಯಬೇಕೆಂಬ ತನ್ನ ಇಚ್ಛೆಯನ್ನು ಅಗಸ್ತ್ಯರಲ್ಲಿ ಹೇಳಿಕೊಂಡಳು. ಅಗಸ್ತ್ಯರು ಕಾವೇರಿಯನ್ನು ನೀರಾಗಿ ಪರಿವರ್ತಿಸಿ ತಮ್ಮ ಕಮಂಡಲದಲ್ಲಿ ಶೇಖರಿಸಿದರು. ಒಂದು ದಿನ ಅಗಸ್ತ್ಯರು ಬ್ರಹ್ಮಗಿರಿಯಲ್ಲಿ ತಪಸ್ಸನ್ನಾಚರಿಸುತ್ತಿದ್ದಾಗ ಕಮಂಡಲ ಗಾಳಿಗೆ ಉರುಳಿ ಅದರಲ್ಲಿದ್ದ ಕಾವೇರಿ ತೀರ್ಥಕುಂಡಿಗೆಗೆ ಜಿಗಿದು ಅಲ್ಲಿಂದ ನದಿಯಾಗಿ ಪ್ರವಹಿಸಿದಳು. ಈ ಪವಿತ್ರ ಪುಣ್ಯಕ್ಷೇತ್ರಕ್ಕೆ ತಲಕಾವೇರಿ ಎಂಬ ನಾಮಧೇಯ. ಇಲ್ಲಿ ಅಗಸ್ತ್ಯೇಶ್ವರ ದೇವಾಲಯ, ಗಣಪತಿ ದೇವಾಲಯ ಇದೆ. ಅಗಸ್ತ್ಯ ಮಹಾಮುನಿಗಳು ಈ ಲಿಂಗವನ್ನು ಸ್ಥಾಪಿಸಿದರು ಎಂಬುದು ಪ್ರತೀತಿ.

ವೈಶಿಷ್ಟ್ಯ

ತಲಕಾವೇರಿಯ ಈ ದೇಗುಲಗಳ ತಗ್ಗಿನಲ್ಲಿ ಕಾವೇರಿ ಉಗಮವಾಗುವ ಚೌಕಾಕರದ ಚಿಕ್ಕ ಕೊಳವಿದೆ. ಅದರ ಮುಂದೆ ಸ್ನಾನಘಟ್ಟ. ಇಲ್ಲಿಯೇ ಕಾವೇರಿ ಹುಟ್ಟುವುದು. ಈ ಸ್ಥಳಕ್ಕೆ ಕುಂಡಿಗೆ ಎನ್ನುತ್ತಾರೆ. ತುಲಾಸಂಕ್ರಮಣದ ನಿಶ್ಚಿತವಾದ ದಿನ ಇಲ್ಲಿ ಕಾವೇರಿ ತೀರ್ಥೋದ್ಭವವಾಗುತ್ತದೆ. ಪ್ರತಿ ವರ್ಷ ತುಲಾ ಮಾಸದ ಸಂಕ್ರಮಣದಿಂದ ವೃಶ್ಚಿಕ ಮಾಸದ ಸಂಕ್ರಮದವರೆಗೆ ಇಲ್ಲಿ ಕಾವೇರಿ ಜಾತ್ರೆ ನಡೆಯುತ್ತದೆ. ತಮಿಳುನಾಡು, ಕೇರಳ, ಪಾಂಡಿಚೇರಿ, ಕರ್ನಾಟಕದ ಹಾಸನ, ಕೊಡಗು, ಮಂಡ್ಯ ಜಿಲ್ಲೆಗಳಿಂದ ಇಲ್ಲಿಗೆ ಭಕ್ತರು ಆಗಮಿಸುತ್ತಾರೆ. ಕೊಳದಲ್ಲಿ ಮಿಂದು ಕುಂಡಿಗೆಯ ತೀರ್ಥ ಕುಡಿದು, ಪ್ಲಾಸ್ಟಿಕ್ ಕ್ಯಾನ್‌ಗಳಲ್ಲಿ ತುಂಬಿಕೊಂಡು ಮನೆಗೆ ಹೋಗುತ್ತಾರೆ. ಇದು ಪೌರಾಣಿಕ ಸ್ಥಳ, ಜೀವ ನದಿ ಹುಟ್ಟುವ ಜನ್ಮಸ್ಥಳ ಹೀಗಾಗಿ ಇದು ಭಕ್ತರಿಗೆ ಪುಣ್ಯ ಕ್ಷೇತ್ರ. ಪ್ರವಾಸಿಗರಿಗೆ ರಮ್ಯಕ್ಷೇತ್ರ. ಶೀತ ಮಾರುತಗಳಿಂದ, ಶೀತಹವೆಯಿಂದ ಕೂಡಿರುವ ಈ ಸ್ಥಳ ರಮಣೀಯ. ಬ್ರಹ್ಮಗಿರಿಯ ಶಿಖರವೇರಿದಾಗ ಕಾಣುವ ಆಕಾಶಶುಭ್ರವಾಗಿರುವ ಬೆಟ್ಟದಪುರದ ನೋಟ ಮನೋಹರ. ಇಲ್ಲಿ ನಿಂತು ನೋಡಿದರೆ, ಹಾವಿನಂತೆ ಹರಿಯುವ ನದಿಗಳನ್ನೂ, ದೂರದಲ್ಲಿ ಅರಬ್ಬಿ ಸಮುದ್ರದ ರುದ್ರರಮಣೀಯ ಪ್ರಕೃತಿ ಸಿರಿಯನ್ನೂ ಕಣ್ತುಂಬಿಕೊಳ್ಳಬಹುದು. ಹತ್ತಿರದಲ್ಲೇ ಇರುವ ಅಬ್ಬಿ ಜಲಪಾತಕ್ಕೆ ಹೋಗಿ ಆನಂದಿಸಬಹುದು.