ರಾಜಕೀಯದಲ್ಲಿ ಬದಲಾವಣೆಯ ಬಿರುಗಾಳಿ ಬೀಸುತ್ತಿದೆ : ಕೆ.ಕೆ.ಮಂಜುನಾಥ್ ಕುಮಾರ್ ಅಭಿಪ್ರಾಯ

ಮಡಿಕೇರಿ ಜು.4 : ಕೆಪಿಸಿಸಿ ರಾಜ್ಯಾಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡ ನಂತರ ರಾಜ್ಯ ಹಾಗೂ ಕೊಡಗು ಜಿಲ್ಲೆಯಲ್ಲಿ ಬದಲಾವಣೆಯ ಬಿರುಗಾಳಿ ಬೀಸುತ್ತಿದ್ದು, ಇತರ ಪಕ್ಷಗಳ ಕಾರ್ಯಕರ್ತರು ಕೂಡ ಕಾಂಗ್ರೆಸ್ ಕಡೆಗೆ ಒಲವು ತೋರುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಬಲಿಷ್ಠ ಗಜಪಡೆಯನ್ನು ಸಜ್ಜುಗೊಳಿಸುತ್ತಿದ್ದು, ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಿವಕುಮಾರ್ ಅವರ ಪದಗ್ರಹಣ ಸಮಾರಂಭದ ಸಂದರ್ಭ ಜಿಲ್ಲೆಯ 104 ಗ್ರಾ.ಪಂ ಸೇರಿದಂತೆ 108 ವಲಯಗಳಲ್ಲಿ ಕಾರ್ಯಕ್ರಮ ವೀಕ್ಷಣೆ ಮತ್ತು ಪ್ರತಿಜ್ಞಾ ವಿಧಿ ಸ್ವೀಕಾರದ ಗುರಿ ಹೊಂದಲಾಗಿತ್ತು. ಆದರೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಉತ್ಸಾಹದಿಂದ 117 ಸ್ಥಳಗಳಲ್ಲಿ ಕಾರ್ಯಕ್ರಮ ನಡೆದಿದ್ದು, ಶೇ. 105ರಷ್ಟು ಯಶಸ್ಸನ್ನು ಸಾಧಿಸಿದ್ದೇವೆ ಎಂದು ಮಂಜುನಾಥ್ ಕುಮಾರ್ ಹೆಮ್ಮೆ ವ್ಯಕ್ತಪಡಿಸಿದರು.
ಜಿಲ್ಲೆಯ ಆರು ಸಾವಿರ ಕಾರ್ಯಕರ್ತರು ಸೇರಿದಂತೆ ಸುಮಾರು ಒಂದು ಲಕ್ಷ ಮಂದಿ ಹಾಗೂ ಬಿಜೆಪಿ ಮತ್ತು ಜೆಡಿಎಸ್ ನ ಕಾರ್ಯಕರ್ತರು ಕೂಡ ಕಾರ್ಯಕ್ರಮ ವೀಕ್ಷಿಸಿದ್ದಾರೆ ಎಂದರು. ಕೆಪಿಸಿಸಿ ವೀಕ್ಷಕರು, ಉಸ್ತುವಾರಿಗಳು, ಸಂಯೋಜಕರು, ಪಕ್ಷದ ಆರು ಬ್ಲಾಕ್ಗಳ ಮುಂಚೂಣಿ ಘಟಕಗಳ ಹಾಗೂ ವಲಯದ ಅಧ್ಯಕ್ಷರುಗಳು, ಪದಾಧಿಕಾರಿಗಳು, ಕಾರ್ಯಕರ್ತರು ಸಂಪೂರ್ಣವಾಗಿ ತೊಡಗಿಸಿಕೊಂಡ ಕಾರಣದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ತಿಳಿಸಿದರು.
ತಾವು ಅಧಿಕಾರ ವಹಿಸಿಕೊಂಡು ಹದಿನೇಳು ತಿಂಗಳು ಕಳೆದಿದ್ದು, ಪಕ್ಷ ಸಂಘಟನೆ ಸಾಕಷ್ಟು ಆಗಿದೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳ ವಿರುದ್ಧ ಇಪ್ಪತ್ತಕ್ಕೂ ಹೆಚ್ಚು ಹೋರಾಟಗಳನ್ನು ನಡೆಸಲಾಗಿದೆ. ಆ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಣ್ಣು ತೆರೆಸುವ ಪ್ರಯತ್ನ ಮಾಡಲಾಗಿದೆ ಎಂದು ಮಂಜುನಾಥ್ ಕುಮಾರ್ ತಿಳಿಸಿದರು.
