ಸಮಸ್ಯೆಗಳಿಗೆ ಶಾಸಕರು ಸ್ಪಂದಿಸುತ್ತಿಲ್ಲ : ಕೊಡಗು ಕಾಂಗ್ರೆಸ್ ಆರೋಪ

04/07/2020

ಮಡಿಕೇರಿ ಜು.4 : ಜಿಲ್ಲೆಯ ಶಾಸಕರುಗಳು ಸಮಸ್ಯೆಗಳಿಗೆ ಪರಿಹಾರ ಸೂಚಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗುತ್ತಿದ್ದಾರೆ. ಸುಮಾರು ನಾಲ್ಕು, ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ಅಭಿವೃದ್ಧಿ ಬಗ್ಗೆ ಯಾವುದೇ ಕಾಳಜಿ ತೋರುತ್ತಿಲ್ಲ. ಪ್ರಾಕೃತಿಕ ವಿಕೋಪದ ಮತ್ತು ಕೊರೋನಾ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಶಾಸಕರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣೆ ಬಂದಾಗ ಮಾತ್ರ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರಧಾನಿ ಮೋದಿ ಅವರ ಹೆಸರು ಹೇಳಿಕೊಂಡು ಬರುತ್ತಾರೆ ಎಂದು ಆರೋಪಿಸಿದ ಅವರು, ಇದನ್ನು ಜಿಲ್ಲೆಯ ಮತದಾರರು ಅರ್ಥಮಾಡಿಕೊಳ್ಳಬೇಕು ಎಂದರು.
ಬಿಜೆಪಿ ಜನ ವಿರೋಧಿ ಪಕ್ಷವಾಗಿದ್ದು, ಕೇಂದ್ರ ಹಾಗೂ ರಾಜ್ಯದ ಆಡಳಿತ ವೈಫಲ್ಯದಿಂದಾಗಿ ಇಂದು ಜನಸಾಮಾನ್ಯರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ ಎಂದು ಟೀಕಿಸಿದರು.
ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದೇಶದಲ್ಲಿ 7 ಲಕ್ಷ ಮತ್ತು ರಾಜ್ಯದಲ್ಲಿ 30 ಸಾವಿರದಷ್ಟು ಸೋಂಕಿತರು ಕಾಣಿಸಿಕೊಂಡಿದ್ದಾರೆ. ಸೋಂಕು ವ್ಯಾಪಿಸುದನ್ನು ತಡೆಯಲು ಅಗತ್ಯವಿರುವ ಯಾವುದೇ ಕ್ರಮಗಳನ್ನು ಸರ್ಕಾರಗಳು ಕೈಗೊಳ್ಳುತ್ತಿಲ್ಲ. ಇದರ ಪರಿಣಾಮವಾಗಿ ರಸ್ತೆಯ ಬದಿಯಲ್ಲಿಯೇ ಶವ ಸಂಸ್ಕಾರ ಮಾಡುವಂತಹ ಪರಿಸ್ಥಿತಿ ಬಂದೊದಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಅತ್ಯಂತ ಕೆಟ್ಟ ಆಡಳಿತವನ್ನು ಪ್ರಧಾನಿ ನರೇಂದ್ರಮೋದಿ ಅವರ ನೇತೃತ್ವದ ಸರ್ಕಾರ ನೀಡಿದೆ. ಬಡ ಜನರ ಬಗ್ಗೆ ಮಿಡಿಯುವ ಹೃದಯವಿಲ್ಲದ ಪ್ರಧಾನಿಯೊಬ್ಬರು ಈ ದೇಶವನ್ನು ಆಳುತ್ತಿದ್ದು, ಯಾರೊಬ್ಬರು ಸಂತೋಷದಿಂದ ಜೀವನ ಸಾಗಿಸುವ ಪರಿಸ್ಥಿತಿಯಲ್ಲಿ ಇಲ್ಲ. ದೇಶದ ಗಡಿ ಭಾಗಕ್ಕೆ ಹೋಗಿ ಸೈನಿಕರ ಯೋಗಕ್ಷೇಮ ವಿಚಾರಿಸಿರುವುದಾಗಿ ಪ್ರಧಾನಿ ಪ್ರಚಾರ ಪಡೆಯುತ್ತಿದ್ದಾರೆ. ಆದರೆ ಗಡಿಯಿಂದ ಸುಮಾರು 35 ಕಿ.ಮೀ ದೂರದಲ್ಲಿ ಅವರು ಸೈನಿಕರನ್ನು ಮಾತನಾಡಿಸಿದ್ದಾರೆಯೇ ಹೊರತು ಗಡಿ ರೇಖೆಯನ್ನು ತಲುಪಿಲ್ಲ ಎಂದು ಮಂಜುನಾಥ್ ಕುಮಾರ್ ಆರೋಪಿಸಿದರು.
ಪ್ರಧಾನಿಯೊಬ್ಬರು ಗಡಿ ಭಾಗಕ್ಕೆ ತೆರಳಿ ಸೈನಿಕರನ್ನು ಮಾತನಾಡಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದಿನ ಪ್ರಧಾನಿಗಳು ಕೂಡ ಗಡಿಗೆ ತೆರಳಿ ಸೈನಿಕರನ್ನು ಮಾತನಾಡಿಸಿದ್ದಾರೆ. ಬಿಜೆಪಿ ಮಂದಿ ಮೊದಲು ಸುಳ್ಳು ಹೇಳುವುದನ್ನು ನಿಲ್ಲಿಸಲಿ ಎಂದು ಒತ್ತಾಯಿಸಿದರು.