ಪ್ರಧಾನಿ ವಿರುದ್ಧ ಅವಾಚ್ಯ ಶಬ್ಧ ಬಳಕೆ ಸರಿಯಲ್ಲ : ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಸ್ಪಷ್ಟನೆ

04/07/2020

ಮಡಿಕೇರಿ ಜು.4 : ಪ್ರಧಾನಿ ಹುದ್ದೆಯಲ್ಲಿ ಇರುವವರ ಬಗ್ಗೆ ಅವಾಚ್ಯ ಪದ ಬಳಸಿ ಮಾತನಾಡುವುದು ಒಬ್ಬ ರಾಜಕರಣಿಗೆ ಶೋಭೆ ತರುವುದಿಲ್ಲ. ಎಲುಬಿಲ್ಲದ ನಾಲಗೆ ಏನು ಬೇಕಾದರು ಮಾತನಾಡಬಹುದು ಆದರೆ ಮೋದಿ ಅವರ ಬಗ್ಗೆ ವಿ.ಪಿ.ಶಶಿಧರ್ ಅವರು ಆಡಿರುವ ಮಾತನ್ನು ಒಪ್ಪಲು ಸಾಧ್ಯವಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಶಬ್ಧಗಳನ್ನು ಬಳಸಿರುವುದನ್ನು ಸಮರ್ಥಿಸಿಕೊಳ್ಳಲಾಗುವುದಿಲ್ಲವೆಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮಕ್ಕೆ ಮುಂದಾಗಿದ್ದರು. ಆದರೆ ಆ ಹೊತ್ತಿನಲ್ಲೇ ಶಶಿಧರ್ ಅವರು ಪ್ರತಿಭಟನೆಯನ್ನು ಆಯೋಜಿಸಿದ್ದರು. ಕಾಂಗ್ರೆಸ್ ಪಕ್ಷದ ಮೇಲಿನ ಅಭಿಮಾನದಿಂದ ಪ್ರತಿಭಟನೆಯಲ್ಲಿ ಜನ ಸೇರಿದ್ದರೆ ಹೊರತು ಶಶಿಧರ್ ಅವರನ್ನು ನೋಡಿ ಅಲ್ಲವೆಂದು ಮಂಜುನಾಥ್ ಕುಮಾರ್ ಹೇಳಿದರು.
ಪ್ರತಿಭಟನೆ ಸಂದರ್ಭ ಶಶಿಧರ್ ಅವರು ಅನಿರೀಕ್ಷಿತವಾಗಿ ಕೆಲವು ಪದಗಳನ್ನು ಬಳಸಿದ್ದಾರೆ, ಘಟನೆ ನಡೆದು ಹೋಗಿದೆ. ಇನ್ನು ಮುಂದೆ ಈ ರೀತಿ ಆಗಬಾರದು ಎಂದು ಪಕ್ಷದ ಮೂಲಕ ಸೂಚನೆಯನ್ನು ನೀಡಲಾಗಿದೆ ಎಂದರು.
ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಕಾರ್ಮಿಕರ ಸಂಖ್ಯೆ ಹೆಚ್ಚು. ಕೊರೋನಾ ಸಂಕಷ್ಟದಿಂದಾಗಿ ಎಲ್ಲರೂ ಅತಂತ್ರ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಕಾರ್ಮಿಕರಿಗೆ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ, ಶಾಸಕರು ಈ ಬಗ್ಗೆ ಕಾಳಜಿ ತೋರುತ್ತಿಲ್ಲ. ಕಡು ಬಡವರು ಹಾಗೂ ಕಾರ್ಮಿಕ ವರ್ಗ ಹಸಿವಿನಿಂದ ಬಳಲುವ ಸ್ಥಿತಿ ಬಂದೊದಗುವ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಬೇಕೆಂದು ಒತ್ತಾಯಿಸಿದರು.

::: ಹೊಗಳುವವರು ಕಾಂಗ್ರೆಸ್ಸಿಗರಲ್ಲ :::
ಅತ್ಯಂತ ಕೆಟ್ಟ ಆಡಳಿತವನ್ನು ನೀಡುತ್ತಿರುವ ಪ್ರಧಾನಿ ನರೇಂದ್ರಮೋದಿ ಅವರನ್ನು ಹೊಗಳುತ್ತಿರುವವರು ಕಾಂಗ್ರೆಸ್ಸಿಗರೇ ಅಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಹಾಗೂ ಪ್ರಧಾನಿ ನರೇಂದ್ರಮೋದಿ ಅವರನ್ನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಮಾನವ ಪ್ರೀತಿಯ ಬದ್ಧತೆಯ ಪಕ್ಷವಾಗಿದ್ದರೆ, ಬಿಜೆಪಿ ವಿಷಮ ಸಿದ್ಧಾಂತವನ್ನು ಹೊಂದಿರುವ ಪಕ್ಷವೆಂದು ಟೀಕಿಸಿದರು. ಮೋದಿ ಅವರನ್ನು ಹೊಗಳಿರುವುದು ಕೆ.ಪಿ.ಚಂದ್ರಕಲಾ ಅವರ ವೈಯುಕ್ತಿಕ ಅಭಿಪ್ರಾಯವೇ ಹೊರತು ಕಾಂಗ್ರೆಸ್ ಪಕ್ಷದ ಅಭಿಪ್ರಾಯವಲ್ಲ ಎಂದು ಮಂಜುನಾಥ್ ಕುಮಾರ್ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಜಿಲ್ಲಾ ವಕ್ತಾರ ಟಿ.ಈ.ಸುರೇಶ್, ನಗರಾಧ್ಯಕ್ಷ ಕೆ.ಯು.ಅಬ್ದುಲ್ ರಜಾಕ್, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಫ್ಯಾನ್ಸಿ ಪಾರ್ವತಿ ಹಾಗೂ ಸಾಮಾಜಿಕ ಜಾಲತಾಣದ ಜಿಲ್ಲಾ ಸಂಯೋಜಕ ಸೂರಜ್ ಹೊಸೂರು ಉಪಸ್ಥಿತರಿದ್ದರು.