ಬಿಜೆಪಿ ಮಂದಿಯೇ ನೈಜ ಆರೋಪಿಗಳು : ಡಿಕೆಶಿ ಅಭಿಮಾನಿಗಳ ಸಂಘ ಆರೋಪ

04/07/2020

ಮಡಿಕೇರಿ ಜು.4 : ಕುಶಾಲನಗರದಲ್ಲಿ ನಡೆದ ಪ್ರತಿಭಟನೆಯೊಂದರಲ್ಲಿ ಕಾಂಗ್ರೆಸ್ ಮುಖಂಡ ವಿ.ಪಿ.ಶಶಿಧರ್ ಅವರು ಆಡಿರುವ ಮಾತಿನ ತುಣುಕೊಂದನ್ನು ಎಡಿಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವ ಮೂಲಕ ಪ್ರಧಾನಿ ಮೋದಿಯವರ ವರ್ಚಸ್ಸಿಗೆ ಕಳಂಕ ತರುತ್ತಿರುವ ಬಿಜೆಪಿ ಮಂದಿಯೇ ನೈಜ ಆರೋಪಿಗಳಾಗಿದ್ದು, ಇವರ ವಿರುದ್ಧ ಮೊದಲು ಪ್ರಕರಣ ದಾಖಲಿಸಬೇಕೆಂದು ಕೊಡಗು ಜಿಲ್ಲಾ ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಸಂಚಾಲಕ ಅಬ್ದುಲ್ ರಜಾಕ್ ಅವರು, ಕಾಂಗ್ರೆಸ್ ಪಕ್ಷದ ಅಧಿನಾಯಕಿಯಾಗಿರುವ ಸೋನಿಯಾ ಗಾಂಧಿ ಅವರ ವಿರುದ್ಧ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಬರೆದಿದ್ದು, ಆ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದಾಗ ಶಶಿಧರ್ ಅವರು, ನಾಳೆ ಇದೇ ರೀತಿ ಪ್ರಧಾನಿ ಮೋದಿಯವರನ್ನು ಬೈದರೆ ಕೇಸು ದಾಖಲಿಸುವುದಿಲ್ಲವೇ ಎಂದು ಉದಾಹರಣೆ ಸಹಿತ ಮಾತನಾಡಿದ್ದಾರೆ.
ಆದರೆ ಅವರು ಆಡಿದ ಎಲ್ಲಾ ಮಾತುಗಳನ್ನು ತೆಗೆದು ಕೇವಲ ಮೋದಿ ಅವರನ್ನು ಅವಾಚ್ಯವಾಗಿ ನಿಂದಿಸಲಾಗಿದೆ ಎಂದು ಪ್ರತಿಬಿಂಬಿಸುವ ಸಲುವಾಗಿ ಬಿಜೆಪಿ ಕಾರ್ಯಕರ್ತರು ವೀಡಿಯೋವನ್ನು ‘ಎಡಿಟ್’ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ವಿ.ಪಿ.ಶಶಿಧರ್ ಅವರು ಮಾಡಿದ ಮಾತಿಗಿಂತಲೂ ಬಿಜೆಪಿ ಕಾರ್ಯಕರ್ತರು ಹರಿಯಬಿಟ್ಟಿರುವ ಈ ವೀಡಿಯೋ ಪ್ರಧಾನಿ ವರ್ಚಸ್ಸಿಗೆ ಕುಂದು ತರುವಂತಿದ್ದು, ಈ ಹಿನ್ನೆಲೆಯಲ್ಲಿ ವೀಡಿಯೋ ಹರಿಯಬಿಟ್ಟಿರುವ ನೈಜ ಆರೋಪಿಗಳ ವಿರುದ್ಧ ಕೇಸು ದಾಖಲಿಸಬೇಕು ಎಂದು ಆಗ್ರಹಿಸಿದರು.
ಸೋನಿಯಾ ಗಾಂಧಿ ವಿರುದ್ಧ ಫೇಸ್‍ಬುಕ್‍ನಲ್ಲಿ ಬರೆಯಲು ಬಳಸಿರುವ ಪದಗಳು ಸಮಾಜದ ಸ್ವಾಸ್ಥ್ಯವನ್ನು ಕದಡಲಿದ್ದು, ಅಂತಹ ಶಬ್ಧಗಳನ್ನು ಮೋದಿಯವರ ವಿರುದ್ಧ ಬಳಸಿದರೆ ನೀವು ಸುಮ್ಮನಿರುತ್ತೀರಾ ಎಂದು ಶಶಿಧರ್ ಅವರು ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದ್ದು, ಈ ಭಾಗವನ್ನು ತೆಗೆದು ಹಾಕಿ ಕೇವಲ ತಮಗೆ ಬೇಕಾದಷ್ಟನ್ನು ಮಾತ್ರ ವೀಡಿಯೋದಲ್ಲಿ ಉಳಿಸಲಾಗಿದೆ. ಅಲ್ಲದೆ ಅದೇ ವೀಡಿಯೋ ಆಧಾರದಲ್ಲಿ ಬಿಜೆಪಿ ಕಾರ್ಯಕರ್ತರು ಎಲ್ಲೆಡೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಕಾರ್ಯಕರ್ತರಿಗೆ ಪ್ರತಿಭಟನೆ ನಡೆಸಲು ಜಿಲ್ಲೆಯ ಜ್ವಲಂತ ಸಮಸ್ಯೆಗಳು, ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ಪರಿಹಾರ ಕಲ್ಪಿಸದಿರುವುದು ಸೇರಿದಂತೆ ಹಲವಾರು ವಿಷಯಗಳಿವೆ. ಅದನ್ನು ಬಿಟ್ಟು ಸರಕಾರದ ವೈಫಲ್ಯವನ್ನು ಮುಚ್ಚಿಹಾಕಲು ಕ್ಷುಲ್ಲಕ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಅಬ್ದುಲ್ ರಜಾಕ್, ವಿ.ಪಿ.ಶಶಿಧರ್ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ತಕ್ಷಣ ಕೈಬಿಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ನವೀದ್ ಖಾನ್, ಉಪಾಧ್ಯಕ್ಷ ಕೆ.ಪಿ.ರಾಘವೇಂದ್ರ, ಮಡಿಕೇರಿ ತಾಲೂಕು ಅಧ್ಯಕ್ಷ ರಿಜ್ವಾನ್, ಕುಶಾಲನಗರ ಅಧ್ಯಕ್ಷ ಬಿ.ಜೆ.ನವೀನ್ ಕುಮಾರ್ ಹಾಗೂ ವೀರಾಜಪೇಟೆ ತಾಲೂಕು ಅಧ್ಯಕ್ಷ ಸಿದ್ದಿಕ್ ಉಪಸ್ಥಿತರಿದ್ದರು.