ಕೊರೋನಾದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ : ವಿವಿಧ ಧಾರ್ಮಿಕ ಮುಖಂಡರೊಂದಿಗೆ ಸಭೆ

04/07/2020

ಮಡಿಕೇರಿ ಜು.4 : ಕೋವಿಡ್-19 ಸೋಂಕಿನಿಂದ ಮೃತಪಟ್ಟಲ್ಲಿ ಅಂತಹವರ ಶವವನ್ನು ‘ಕಾರ್ಯಾಚರಣ ವಿಧಾನ’ದಂತೆ (Sಣಚಿಟಿಜಚಿಡಿಜ ಔಠಿeಡಿಚಿಣiಟಿg Pಡಿoಛಿeಜuಡಿe) ನಿಯಮ ಬದ್ಧವಾಗಿ ಅಂತ್ಯಸಂಸ್ಕಾರ ಮಾಡಬೇಕಿದ್ದು, ಆ ನಿಟ್ಟಿನಲ್ಲಿ ವಿವಿಧ ಸಮಾಜಗಳ ಮತ್ತು ಧಾರ್ಮಿಕ ಮುಖಂಡರು ಸಹಕರಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೋರಿದ್ದಾರೆ.
ನಗರದ ವೈದ್ಯಕೀಯ ಕಾಲೇಜಿನಲ್ಲಿ ವಿವಿಧ ಸಮಾಜದ ಹಾಗೂ ಧಾರ್ಮಿಕ ಮುಖಂಡರೊಂದಿಗೆ ಶನಿವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಇಡೀ ರಾಜ್ಯ ಹಾಗೂ ದೇಶದಲ್ಲಿ ಕೋವಿಡ್-19 ಸೋಂಕು ಹರಡುತ್ತಿದೆ. ಆದ್ದರಿಂದ ಆಕಸ್ಮಿಕವಾಗಿ ಕೋವಿಡ್-19 ಸೋಂಕಿನಿಂದ ಮರಣ ಹೊಂದಿದ್ದಲ್ಲಿ ಎಸ್‍ಒಪಿಯಂತೆ ಅಂತ್ಯಸಂಸ್ಕಾರ ಮಾಡಬೇಕಿದ್ದು, ಮೃತಪಟ್ಟ ಕುಟುಂಬದವರು ಹಾಗೂ ಇತರ ಬಂಧುಗಳು ಸಹಕರಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ಮನವಿ ಮಾಡಿದರು.
ಕೋವಿಡ್ ಸೋಂಕಿನಿಂದ ಮೃತಪಟ್ಟಲ್ಲಿ ಶವ ಸಂಸ್ಕಾರ ಮಾಡಲು ಜಿಲ್ಲಾಡಳಿತವು 3 ತಾಲೂಕಿನಲ್ಲಿ ತಲಾ 1 ಎಕರೆ ಜಾಗವನ್ನು ಗುರುತಿಸಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದರು.
ಶವ ಸಂಸ್ಕಾರ ಸಂದರ್ಭದಲ್ಲಿ ಕಾರ್ಯಾಚರಣ ವಿಧಾನ ಮಾಡಬೇಕಿರುವುದರಿಂದ ಜಿಲ್ಲೆಯಲ್ಲಿ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಿ ತರಬೇತಿ ನೀಡಲಾಗುವುದು. ಜೊತೆಗೆ ವಿವಿಧ ಧಾರ್ಮಿಕ ಹಾಗೂ ಸಮಾಜದ ಕಡೆಯಿಂದ ಸ್ವಯಂ ಸೇವಕರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದಲ್ಲಿ ಅಂತಹವರಿಗೂ ಸಹ ತರಬೇತಿ ನೀಡಲಾಗುವುದು. ಈ ಸಂಬಂಧ ಆಯಾ ತಾಲೂಕಿನ ಡಿವೈಎಸ್‍ಪಿಗಳಿಗೆ ಜುಲೈ 6 ರ ಸಂಜೆಯೊಳಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ಮೃತ ದೇಹವನ್ನು ಮರಣೋತ್ತರ ಪರೀಕ್ಷೆ (ಪೋಸ್ಟ್ ಮಾರ್ಟಮ್) ಮಾಡುವುದಿಲ್ಲ. 4 ಮೀಟರ್ ಅಂತರದಲ್ಲಿ ಮೃತದೇಹದ ಮುಖವನ್ನು ನೋಡಬಹುದು. 4 ಮೀಟರ್ ದೂರದಲ್ಲಿಯೇ ವಿವಿಧ ಧಾರ್ಮಿಕ ಸಂಪ್ರದಾಯವನ್ನು ನೆರವೇರಿಸಬಹುದು ಎಂದು ಜಿಲ್ಲಾಧಿಕಾರಿ ಅವರು ವಿವರಿಸಿದರು.
ನ್ಯಾಯವೈದ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಉಮೇಶ್ ಬಾಬು ಅವರು ಮಾತನಾಡಿ, ಕೋವಿಡ್ ಸೋಂಕಿನಿಂದ ಮೃತಪಟ್ಟಲ್ಲಿ ಕಾರ್ಯಾಚರಣಾ ವಿಧಾನ (ಎಸ್‍ಒಪಿ) ಮಾರ್ಗಸೂಚಿಯಂತೆ ಆಂಬುಲೆನ್ಸ್ ಮೂಲಕ ದೇಹವನ್ನು ಜಿಲ್ಲಾಡಳಿತ ಗುರುತಿಸಿರುವ ನಿಗದಿತ ಜಾಗಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಮೃತ ದೇಹದ ಸುತ್ತ 3 ಸುತ್ತು ಪ್ಯಾಕ್ ಮಾಡಲಾಗುತ್ತದೆ. ಅಂತ್ಯಕ್ರಿಯೆಯನ್ನು 4 ಮಂದಿ ಸಿಬ್ಬಂದಿಗಳು ನೆರವೇರಿಸುತ್ತಾರೆ. ಮೃತದೇಹವನ್ನು ಕುಟುಂಬದ 5 ಮಂದಿ ಮಾತ್ರ ನೋಡಲು ಅವಕಾಶವಿದೆ. ಮೃತ ದೇಹವನ್ನು ಮುಟ್ಟಲು ಅವಕಾಶವಿರುವುದಿಲ್ಲ. ವಿವಿಧ ಧಾರ್ಮಿಕ ಪದ್ಧತಿಯಡಿ ಶವ ಸಂಸ್ಕಾರಕ್ಕೆ ಅವಕಾಶವಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರು ಮಾತನಾಡಿ, ಕೋವಿಡ್ ಸೋಂಕಿನಿಂದ ಮೃತಪಟ್ಟಲ್ಲಿ ಮೃತದೇಹವನ್ನು ಸರ್ಕಾರದ ನಿರ್ದೇಶನದಂತೆ ನಿಯಮಬದ್ಧವಾಗಿ ಅಂತ್ಯ ಸಂಸ್ಕಾರ ಮಾಡಲಾಗುವುದು. ಇದಕ್ಕೆ ಕುಟುಂಬದವರು, ಧಾರ್ಮಿಕ ಮುಖಂಡರು ಸಹಕರಿಸಬೇಕಿದೆ ಎಂದರು.
ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರಾದ ಕೆ.ಎಸ್.ದೇವಯ್ಯ ಅವರು ಮಾತನಾಡಿ, ಜಿಲ್ಲಾಡಳಿತ ಕೋವಿಡ್ ನಿಯಂತ್ರಿಸುವಲ್ಲಿ ಶ್ರಮಿಸಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ವಿವಿಧ ಧಾರ್ಮಿಕ ಪದ್ಧತಿಯಂತೆ ಅಂತ್ಯ ಸಂಸ್ಕಾರಕ್ಕೆ ಅವಕಾಶ ಮಾಡಬೇಕು ಎಂದು ಕೋರಿದರು.
ಸೇವಾ ಭಾರತಿಯ ಮಹೇಶ್ ಕುಮಾರ್ ಅವರು ಮಾತನಾಡಿ, ಶವ ಸಂಸ್ಕಾರ ಮಾಡಲು ಸೇವಾ ಭಾರತಿ ತಂಡ ಸಿದ್ಧವಿದೆ. ಅದಕ್ಕೆ ಅಗತ್ಯ ಸಹಕಾರ ನೀಡಬೇಕಿದೆ ಎಂದರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷರಾದ ಅಮೀನ್ ಮೊಹಿಸಿನ್ ಅವರು ಮಾತನಾಡಿ, ಈಗಾಗಲೇ ಶವ ಸಂಸ್ಕಾರದಲ್ಲಿ ತೊಡಗಿಸಿಕೊಳ್ಳಲು 30 ಜನರ ತಂಡ ಸಿದ್ಧವಿದೆ. ಜಿಲ್ಲಾಡಳಿತಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಮಡಿಕೇರಿ ಮುಸ್ಲಿಂ ಜಮಾತ್ ಒಕ್ಕೂಟದ ಅಧ್ಯಕ್ಷರಾದ ಮೊಹಮ್ಮದ್ ಅಲಿ ಅವರು ಮಾತನಾಡಿ, ಮಡಿಕೇರಿ ನಗರದಲ್ಲಿ ಜಮಾತ್‍ಗೆ ಸೇರಿದ 22 ಎಕರೆ ಜಾಗವಿದ್ದು, ಕೋವಿಂಡ್ ಸೋಂಕಿನಿಂದ ಮುಸ್ಲಿಂ ಸಮಾಜದವರು ಮೃತಪಟ್ಟಲ್ಲಿ ಶವ ಸಂಸ್ಕಾರಕ್ಕೆ 1 ಎಕರೆ ಜಾಗ ನೀಡಲಾಗುವುದು. ಆದ್ದರಿಂದ ಕೋವಿಡ್ ಸೋಂಕಿನಿಂದ ಮುಸ್ಲಿಂ ಸಮಾಜದವರು ಮೃತಪಟ್ಟಲ್ಲಿ ಈ ಜಾಗದಲ್ಲಿ ಅಂತ್ಯ ಸಂಸ್ಕಾರ ಮಾಡಲು ಅವಕಾಶ ನೀಡಬೇಕೆಂದು ಕೋರಿದರು. ಇದಕ್ಕೆ ಜಿಲ್ಲಾಧಿಕಾರಿ ಅವರು ಪರಿಶೀಲಿಸಲಾಗುವುದು ಎಂದು ತಿಳಿಸಿದರು.

 

ಗೌಡ ಸಮಾಜದ ಅಧ್ಯಕ್ಷರಾದ ಸೂರ್ತಲೆ ಸೋಮಣ್ಣ ಅವರು ಮಾತನಾಡಿ, ಹಿಂದೂ ಧಾರ್ಮಿಕ ಪದ್ಧತಿಯಲ್ಲಿ ಮೃತಪಟ್ಟವರಿಗೆ ನೀರು ಕುಡಿಸುವ ಪದ್ಧತಿ ಇದ್ದು, 4 ಮೀಟರ್ ದೂರದಲ್ಲಾದರೂ ಬಾಯಿಗೆ ನೀರು ಹಾಕಲು ಅವಕಾಶ ಮಾಡಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ವಿದ್ಯುತ್ ಚಿತಾಗಾರ ಕೇಂದ್ರ (ಎಲೆಕ್ಟಿಟಿಕಲ್ ಬರ್ನಿಂಗ್ ಯೂನಿಟ್) ತೆರೆಯಲು ಪ್ರಯತ್ನಿಸಬೇಕಿದೆ ಎಂದು ಸೂರ್ತಲೆ ಸೋಮಣ್ಣ ಅವರು ಸಲಹೆ ಮಾಡಿದರು.
ವಕ್ಫ್ ಬೋರ್ಡ್ ಅಧ್ಯಕ್ಷರಾದ ಕೆ.ಎ.ಯಾಕೂಬ್ ಅವರು ಮಾತನಾಡಿ, ಶವ ಸಂಸ್ಕಾರಕ್ಕೆ ಸಂಬಂಧಿಸಿದಂತೆ ಜಿಲಾಡಳಿತಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.
ಸಿಎಸ್‍ಐ ಚರ್ಚ್‍ನ ಅಮೃತ್ ರಾಜ್ ಅವರು ಮಾತನಾಡಿ, ಕ್ರಿಶ್ಚಿಯನ್ ಧರ್ಮದಲ್ಲಿ ಮೃತದೇಹವನ್ನು ಪೆಟ್ಟಿಗೆಯಲ್ಲಿಟ್ಟು ಹೂಳುವ ಪದ್ಧ್ದತಿಯಿದ್ದು ಇದಕ್ಕೆ ಅವಕಾಶವಿದೆಯೇ ಎಂದರು. ಇದಕ್ಕೆ ಡಾ.ಉಮೇಶ್ ಅವರು ವಿವಿಧ ಧಾರ್ಮಿಕ ಪದ್ಧತಿಯಲ್ಲಿ ಶವ ಸಂಸ್ಕಾರ ಮಾಡಬಹುದಾಗಿದೆ ಎಂದರು.
ಕೊಡಗು ಜಿಲ್ಲಾ ಕ್ರೈಸ್ತರ ಸೇವಾ ಸಂಘದ ಅಧ್ಯಕ್ಷರಾದ ಕೆ.ಟಿ.ಬೇಬಿಮ್ಯಾಥ್ಯು ಅವರು ಮಾತನಾಡಿ, ಅಂತ್ಯ ಸಂಸ್ಕಾರವನ್ನು ಗೌರವಯುತವಾಗಿ ನೆರವೇರಿಸಬೇಕು ಎಂದು ಅವರು ಕೋರಿದರು. ಕ್ರಿಶ್ಚಿಯನ್ ಸಮುದಾಯದಲ್ಲಿ ಯಾವುದಾದರು ಸ್ಥಳವಿದ್ದಲ್ಲಿ ಧರ್ಮ ಗುರುಗಳೊಂದಿಗೆ ಚರ್ಚಿಸಿ ಜಿಲ್ಲಾಡಳಿತಕ್ಕೆ ಮಾಹಿತಿ ನಿಡಲಾಗುವುದು ಎಂದರು.
ಭಜರಂಗದಳದ ವಿನಯ್‍ಕುಮಾರ್ ಅವರು ಮಾತನಾಡಿ, ಸೇವ ಭಾರತಿಯೊಂದಿಗೆ ಸೇರಿ ಶವ ಸಂಸ್ಕಾರದ ಸಂಬಂಧ ಜಿಲ್ಲಾಡಳಿತಕ್ಕೆ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.
ಸಭೆಯ ಕೊನೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ಅಂತ್ಯ ಸಂಸ್ಕಾರ ಸಂಬಂಧಿಸಿದಂತೆ ವಿಡೊಯೊವನ್ನು ಸರ್ಕಾರದ ವತಿಯಿಂದ ಮಾಡಲಾಗುತ್ತದೆ. ಬೇರೆಯವರು ವಿಡಿಯೊ ಮಾಡುವಂತಿಲ್ಲ ಎಂದು ಅವರು ತಿಳಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕಾರ್ಯಪ್ಪ, ಅಧಿಕ್ಷಕರಾದ ಡಾ.ಎ.ಜೆ. ಲೋಕೇಶ್, ವಿವಿಧ ಸಮಾಜ ಹಾಗೂ ಧಾರ್ಮಿಕ ಮುಖಂಡರು ಹಾಜರಿದ್ದರು.