ಜು. 6 ರಿಂದ ಎಂದಿನಂತೆ ವ್ಯಾಪಾರ ವಹಿವಾಟು ಆರಂಭ

04/07/2020

ಮಡಿಕೇರಿ ಜು. 4 : ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಕರೆ ನೀಡಿದಂತೆ ಕೊಡಗಿನಲ್ಲಿ ವಾಣಿಜ್ಯೋದಮಿಗಳು ತಮ್ಮ ತಮ್ಮ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತರಾಗಿ ಲಾಕ್‍ಡೌನ್ ಮಾಡಲು ಸಹಕರಿಸಿದ್ದು, ಸೋಮವಾರ ಎಂದಿನಂತೆ ವ್ಯಾಪಾರ ವಹಿವಾಟು ನಡೆಯಲಿದೆ ಎಂದು ಕಾಮರ್ಸ್‍ನ ಅಧ್ಯಕ್ಷ ಎಂ. ಬಿ. ದೇವಯ್ಯ ಹಾಗೂ ಪ್ರಧಾನ ಕಾರ್ಯದರ್ಶಿ ನವೀನ್ ಅಂಬೆಕಲ್ ತಿಳಿಸಿದ್ದಾರೆ.

ಈ ಲಾಕ್ಡೌನ್ ಜು. 4 ರಂದು(ಇಂದಿಗೆ) ಮುಕ್ತಾಯವಾಗಲಿದ್ದು, ಸೋಮವಾರದಿಂದ ಎಂದಿನಂತೆ ವ್ಯಾಪಾರ ವಹಿವಾಟು ನಡೆಸಬಹುದಾಗಿದೆ. ಜಿಲ್ಲಾಡಳಿತದಿಂದ ಬಂದ ಮಾಹಿತಿ ಪ್ರಕಾರ, ರಾಜ್ಯ ಸರ್ಕಾರದ ನಿರ್ಧಾರದಂತೆ ಎಲ್ಲಾ ಭಾನುವಾರದಂದು ಸಂಪೂರ್ಣ ಲಾಕ್ಡೌನ್ ಮಾಡಬೇಕಿದೆ. ಇನ್ನುಳಿದ ದಿನಗಳಲ್ಲಿ ಯಾವುದೇ ರೀತಿಯ ನಿರ್ಬಂಧಗಳು ಇರುವುದಿಲ್ಲ.

ಆದಾಗ್ಯೂ, ವರ್ತಕರ ಮತ್ತು ಗ್ರಾಹಕರ ಹಿತದೃಷ್ಟಿಯಿಂದ ಸ್ವಯಂ ಜಾಗೃತಿಯಲ್ಲಿರುವುದು ಪ್ರಸ್ತುತದ ಸಂಕಷ್ಟ ಪರಿಸ್ಥಿತಿಯಲ್ಲಿ ಅತ್ಯವಶ್ಯಕ. ಅಂಗಡಿ ಮುಂಗಟ್ಟುಗಳಲ್ಲಿ ಹೆಚ್ಚು ಜನಸಂದಣಿ ಸೇರದಂತೆ ನೋಡಿಕೊಳ್ಳುವುದು, ಅತ್ಯಗತ್ಯವಿದ್ದಲ್ಲಿ ಮಾತ್ರ ವ್ಯಾಪಾರ ನಡೆಸುವುದು ಒಳಿತು. ಕೊಡಗಿನ ಜನತೆ ಜವಾಬ್ದಾರಿಯುತವಾಗಿ ನಡೆದುಕೊಂಡಾಗ ಮಾತ್ರ, ಕೊರೊನಾ ಮುಕ್ತ ಕೊಡಗಿನಲ್ಲಿ ಜನಜೀವನ, ವ್ಯಾಪಾರ ವಹಿವಾಟು ಎಂದಿನಂತೆ ನಡೆಯಲು ಸಾಧ್ಯ.