ಲಾಕ್ ಡೌನ್ ಭಾನುವಾರ : ಕೊಡಗು ಸ್ತಬ್ಧ

05/07/2020

ಮಡಿಕೇರಿ ಜು.5 : ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಿಸುವ ಸಲುವಾಗಿ ರಾಜ್ಯ ಸರಕಾರ ಕರೆ ನೀಡಿದ್ದ ಭಾನುವಾರದ ಲಾಕ್ ಡೌನ್‍ಗೆ ಕೊಡಗು ಜಿಲ್ಲೆಯಲ್ಲಿ ಉತ್ತಮ ಸ್ಪಂದನ ದೊರಕಿದ್ದು, ಜನರು ಸ್ವಯಂಪ್ರೇರಿತರಾಗಿ ಮನೆಯಲ್ಲೇ ಉಳಿಯುವ ಮೂಲಕ ಕೊರೋನಾ ನಿಯಂತ್ರಣಕ್ಕೆ ಕೈಜೋಡಿಸಿದರು.
ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಜಿಲ್ಲೆಯ ಬಹುತೇಕ ನಗರ, ಪಟ್ಟಣಗಳು ಸ್ತಬ್ಧಗೊಂಡಿದ್ದವು. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದರೆ, ಜನ, ವಾಹನಗಳ ಸಂಚಾರ ವಿರಳವಾಗಿತ್ತು.
ಶನಿವಾರ ರಾತ್ರಿಯಿಂದಲೇ ಕಫ್ರ್ಯೂ ಜಾರಿಯಾಗಿದ್ದು, ಭಾನುವಾರವೂ ಜನ, ವಾಹನಗಳು ರಸ್ತೆಗಿಳಿಯಲಿಲ್ಲ. ತುರ್ತು ಕಾರ್ಯದ ನಿಮಿತ್ತ ತೆರಳುವ ವಾಹನಗಳು ಹಾಗೂ ಜನರ ಹೊರತಾಗಿ ಇತರರು ಮನೆಗಳಿಂದ ಹೊರ ಬಾರದಂತೆ ಪೊಲೀಸರು ಮನವಿ ಮಾಡಿಕೊಳ್ಳುತ್ತಿದ್ದ ದೃಶ್ಯ ಮಡಿಕೇರಿ ಸೇರಿದಂತೆ ಹಲವೆಡೆ ಕಂಡು ಬಂದಿತು.
ಹಸಿರು ವಲಯದಲ್ಲಿದ್ದ ಕೊಡಗು ಜಿಲ್ಲೆಯಲ್ಲೂ ಕಳೆದ ಒಂದು ವಾರದಿಂದ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ವೈರಸ್ ವ್ಯಾಪಿಸುವ ಭೀತಿ ಹೆಚ್ಚಾಗಿದ್ದು, ಇದರ ಪರಿಣಾಮವಾಗಿ ಜನ ಸ್ವಯಂಪ್ರೇರಿತರಾಗಿ ಮನೆಯಲ್ಲೇ ಉಳಿದರು.
ಜಿಲ್ಲೆಯ ಸಿದ್ದಾಪುರ, ಸುಂಟಿಕೊಪ್ಪ, ವೀರಾಜಪೇಟೆ, ಗೋಣಿಕೊಪ್ಪ ಸೋಮವಾರಪೇಟೆ, ಶನಿವಾರಸಂತೆ, ಕುಶಾಲನಗರ ಸೇರಿದಂತೆ ಬಹುತೇಕ ಕಡೆಗಳಲ್ಲಿ ಸಂಪೂರ್ಣ ಬಂದ್ ಆಗಿತ್ತು. ಪ್ರತಿದಿನ ಸಂಚರಿಸುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‍ಗಳು ಕೂಡ ರಸ್ತೆಗೆ ಇಳಿಯಲಿಲ್ಲ.
ಔಷಧಿ ಅಂಗಡಿಗಳ ಹೊರತಾಗಿ ಬಹುತೇಕ ಎಲ್ಲಾ ವ್ಯಾಪಾರ ವಹಿವಾಟು ಸ್ಥಗಿತವಾಗಿತ್ತು.