ಕೊಡಗಿನಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕು : ಗಡಿ ಗೇಟ್ ಬಂದ್ ಮಾಡಲು ಮನವಿ

05/07/2020

ಮಡಿಕೇರಿ ಜು.5 : ಕೊಡಗಿನಲ್ಲಿ ದಿನೇದಿನೇ ಕೋವಿಡ್-19 ಸೋಂಕು ಹೆಚ್ಚುತ್ತಿದ್ದು, ಜಿಲ್ಲೆಯ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲೆಯ ಎಲ್ಲಾ ಗಡಿ ಗೇಟ್‍ಗಳನ್ನು ಜಿಲ್ಲಾಡಳಿತ ಕೂಡಲೇ ಬಂದ್ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯ ಬಿ.ಎನ್.ಪ್ರಥ್ಯು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕೊಡಗು-ಕೇರಳ ಗಡಿಭಾಗದ ಕರಿಕೆ, ಮಾಕುಟ್ಟ, ಮತ್ತು ಕುಟ್ಟ ಅಂತರರಾಜ್ಯ ಗಡಿಗೇಟ್ ಪೂರ್ಣವಾಗಿ ಮುಚ್ಚಲ್ಪಟ್ಟಿವೆÉ. ಅದರಂತೆ ಈಗ ಮಡಿಕೇರಿ ತಾಲೂಕಿನ ಸಂಪಾಜೆ, ವೀರಾಜಪೇಟೆ ತಾಲೂಕಿನ ಆನೆಚೌಕೂರು, ಕಾರ್ಮಾಡು ಮತ್ತು ಮಾಲ್ದಾರೆ, ಸೋಮವಾರಪೇಟೆ ತಾಲೂಕಿನ ಅಂತರ್ ಜಿಲ್ಲಾ ಗಡಿಗೇಟ್‍ಗಳಾದ ಕೊಪ್ಪ, ಶಿರಂಗಾಲ, ಬಿಸ್ಲೆಘಾಟ್ ಮತ್ತು ಶನಿವಾರಸಂತೆ ಸಮೀಪದ ಮಾಗಲು ಗೇಟುಗಳನ್ನು ಕೂಡಲೇ ಬಂದ್ ಮಾಡಿದರೆ ಮಾತ್ರ ಕೊಡಗನ್ನು ಮಹಾಮಾರಿ ಕೊರೋನಾ ಸೋಂಕಿನಿಂದ ರಕ್ಷಿಸಲು ಸಾಧ್ಯ. ಅಗತ್ಯ ಸೇವೆಗಳ ಸರಕು ಸಾಗಾಣಿಕೆ ಮತ್ತು ತುರ್ತು ವೈದ್ಯಕೀಯ ಸೇವೆಗಳ ಸಂಚಾರವನ್ನು ಹೊರತುಪಡಿಸಿ ಇನ್ನು ಯಾವುದೇ ಕಾರಣಕ್ಕೂ ಗೇಟನ್ನು ತೆರೆಯಬಾರದು. ಜನರ ಆರೋಗ್ಯ ದೃಷ್ಟಿಯಿಂದ ಕನಿಷ್ಟ ಒಂದು ತಿಂಗಳಿಗಾದರೂ ಜಿಲ್ಲಾಧಿಕಾರಿಗಳು ಈ ಕುರಿತು ನೂತನ ಆದೇಶ ಹೊರಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಕೇವಲ 3ರಷ್ಟಿದ್ದ ಸೋಂಕಿತರ ಸಂಖ್ಯೆ ಲಾಕ್ ಡೌನ್ ಸಡಿಲಿಕೆ ಮಾಡಿದ ಬಳಿಕ ಕೆಲವೇ ದಿನಗಳಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಪತ್ತೆಯಾದ ಎಲ್ಲಾ ಸೋಂಕು ಪ್ರಕರಣಗಳು ಹೊರಗಿನಿಂದ ಬಂದವರ ಸಂಪರ್ಕದ ಕಾರಣದಿಂದ ಎಂಬುದು ದೃಢಪಟ್ಟಿದೆ. ಆದ್ದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯನ್ನು ನಿಯಂತ್ರಿಸಲು ಗಡಿಗೇಟ್‍ಗಳನ್ನು ಬಂದ್ ಮಾಡುವುದೇ ಈಗ ಉಳಿದಿರುವ ಏಕೈಕ ಮಾರ್ಗ ಎಂದು ತಿಳಿಸಿರುವ ಪ್ರಥ್ಯು ಅವರು, ಜನ ಸುರಕ್ಷಿತವಾಗಿದ್ದರೆ ಮಾತ್ರ ಎಲ್ಲವೂ ಸಾಧ್ಯ. ಈ ಹಿನ್ನೆಲೆಯಲ್ಲಿ ಜನರ ಜೀವ ರಕ್ಷಣೆಗೆ ಜಿಲ್ಲಾಡಳಿತ ಮೊದಲ ಆದ್ಯತೆ ನೀಡಬೇಕು. ಗಡಿ ಗೇಟ್‍ಗಳಲ್ಲಿ ಯಾವುದೇ ನಿರ್ಬಂಧ ಹೇರದಿದ್ದರೆ ಮುಂದಿನ ದಿನಗಳಲ್ಲಿ ಕೊಡಗಿನಲ್ಲಿ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಎಲ್ಲಾ ಸಾಧ್ಯತೆಗಳಿವೆ ಎಂದೂ ಎಚ್ಚರಿಸಿದ್ದಾರೆ.
ಕೊಡಗಿನ ಜನ ಎರಡು ವರ್ಷಗಳ ಕಾಲ ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಆದ ಪ್ರಕೃತಿ ವಿಕೋಪದ ಅನಾಹುತಗಳಿಂದ ಇನ್ನೂ ಸರಿಯಾಗಿ ಚೇತರಿಸಿಕೊಂಡಿಲ್ಲ. ಇದಲ್ಲದೆ ವಿಶೇಷವಾಗಿ ದಕ್ಷಿಣ ಕೊಡಗಿನಲ್ಲಿ ಕಳೆದ ಕೆಲವು ವರ್ಷಗಳಿಂದ ಕಾಡು ಪ್ರಾಣಿಗಳ ನಿರಂತರ ಉಪಟಳದಿಂದಾಗಿ ಜನರು ಮತ್ತಷ್ಟು ಕಂಗಾಲಾಗಿ ಹೋಗಿದ್ದಾರೆ. ಈ ನಡುವೆ ಕೋವಿಡ್-19ರ ಸೋಂಕಿತರ ಸಂಖ್ಯೆ ಪ್ರತಿದಿನ ಗಣನೀಯವಾಗಿ ಹೆಚ್ಚುತ್ತಿರುವ ಈ ಸಮಯದಲ್ಲಿ ಜನರ ಜೀವವನ್ನು ರಕ್ಷಿಸುವುದೇ ಬಹುದೊಡ್ಡ ಸವಾಲಾಗಿದೆ ಎಂದು ಆತಂಕ ವ್ಯಕ್ತಪಡಿಸಿರುವ ಅವರು, ಇದೀಗ ದಕ್ಷಿಣ ಕೊಡಗಿನ ಬಾಳೆಲೆ ಸೇರಿದಂತೆ ವಿವಿಧ ಪಟ್ಟಣಗಳಲ್ಲಿ ಆರೋಗ್ಯದ ದೃಷ್ಟಿಯಿಂದ ಜನರೇ ಸ್ವಯಂಪ್ರೇರಣೆಯಿಂದ ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಮಹಾಮಾರಿ ರೋಗಾಣು ಸೋಂಕಿನಿಂದ ಜಿಲ್ಲೆಯ ಜನತೆಯ ಹಿತ ಕಾಪಾಡುವ ದೃಷ್ಟಿಯಿಂದ ಕೈಗೊಳ್ಳುವ ಕ್ರಮಗಳಿಗೆ ಯಾವುದೇ ಅಪಸ್ವರವಿಲ್ಲದೆ ಜನತೆ ಸಹಕಾರ ನೀಡಲಿದ್ದಾರೆ ಎಂದೂ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕೊಡಗಿಗೆ ಹೊರಗಿನ ಕಾರ್ಮಿಕರು ದಿನನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇವರೆಲ್ಲಾ ಹೊಟ್ಟೆಪಾಡಿಗಾಗಿ ಕೂಲಿ ಕೆಲಸವನ್ನೇ ಅವಲಂಬಿಸಿದರೂ ಅವರ ಸುರಕ್ಷತೆಯೂ ಮುಖ್ಯವಾಗಿದೆ. ಆದ್ದರಿಂದ ಹೊರಗಿನಿಂದ ಜಿಲ್ಲೆಗೆ ಬರುವ ಕಾರ್ಮಿಕರನ್ನು ತಾತ್ಕಾಲಿಕವಾಗಿ ತಡೆ ಹಿಡಿಯಬೇಕು. ಇದಕ್ಕಾಗಿ ಗಡಿಗೇಟ್‍ಗಳಲ್ಲಿ ವಿಶೇಷ ತಂಡವನ್ನು ಜಿಲ್ಲಾಡಳಿತ ನಿಯೋಜಿಸಬೇಕು. ಇದಲ್ಲದೆ, ಜನರ ಆರೋಗ್ಯ ಕಾಪಾಡಲು ತಮ್ಮ ವೇತನದ ಮಿತಿಗೂ ಮೀರಿ ನಿಸ್ವಾರ್ಥವಾಗಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತರ ಸೇವೆಯನ್ನು ಸರಕಾರ ‘ವಿಶೇಷ ಪ್ರಕರಣ’ ಎಂದು ಪರಿಗಣಿಸಿ ಕೋವಿಡ್ -19ರ ಕಾರ್ಯಾಚರಣೆ ಅವಧಿಯಲ್ಲಿ ಅವರಿಗೆ ವಿಶೇಷ ಭತ್ಯೆಯನ್ನು ಘೋಷಿಸಬೇಕು ಎಂದು ಬಿ.ಎನ್.ಪ್ರಥ್ಯು ಸಲಹೆ ಮಾಡಿದ್ದಾರೆ.
ಇದೀಗ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಆಯಾ ತಾಲೂಕು ಆಸ್ಪತ್ರೆಗಳಲ್ಲಿ ಕೋವಿಡ್-19 ಘಟಕವನ್ನು ಆರಂಭಿಸಿ ಸೋಂಕಿತರಿಗೆ ಅಲ್ಲೇ ಚಿಕಿತ್ಸೆ ನೀಡಬೇಕು. ಕೋವಿಡ್-19 ಪರೀಕ್ಷಾ ಪ್ರಯೋಗಾಲಯಗಳನ್ನು ಕೂಡ ಆಯಾ ತಾಲೂಕು ಕೇಂದ್ರಗಳಲ್ಲಿ ಸ್ಥಾಪಿಸಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.