ಕೆ.ಪಿ.ಚಂದ್ರಕಲಾ ವಿರುದ್ಧ ಕ್ರಮಕ್ಕೆ ಶಿಫಾರಸ್ಸು : ಕಾಂಗ್ರೆಸ್ ವಕ್ತಾರ ಟಾಟು ಮೊಣ್ಣಪ್ಪ

ಮಡಿಕೇರಿ ಜು.5 : ಆತುರದ ನಿರ್ಧಾರಗಳಿಂದ ಇಡೀ ದೇಶವನ್ನೇ ಸಂಕಷ್ಟಕ್ಕೆ ಸಿಲುಕಿಸಿ ಎಲ್ಲಾ ಕ್ಷೇತ್ರಗಳಲ್ಲಿ ವೈಫಲ್ಯತೆಯನ್ನು ಕಾಣುತ್ತಿರುವ ಪ್ರಧಾನಿ ನರೇಂದ್ರಮೋದಿ ಅವರನ್ನು ಒಂದು ಶಕ್ತಿ ಎಂದು ಬಣ್ಣಿಸಿರುವ ಜಿ.ಪಂ ಸದಸ್ಯೆ ಕೆ.ಪಿ.ಚಂದ್ರಕಲಾ ಅವರ ವಿರುದ್ಧ ಕ್ರಮಕ್ಕೆ ಕೆಪಿಸಿಸಿಗೆ ಶಿಫಾರಸ್ಸು ಮಾಡಲಾಗುವುದೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎ.ಎಸ್.ಟಾಟು ಮೊಣ್ಣಪ್ಪ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಹಲವು ದಶಕಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷ ಈ ದೇಶದ ಮಹಾಶಕ್ತಿಯೇ ಹೊರತು ಜನಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಪ್ರಧಾನಿ ಮೋದಿ ಅವರು ಶಕ್ತಿಯಾಗಲು ಸಾಧ್ಯವಿಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡೇ ಮೋದಿ ಅವರ ಪರ ಮಾತನಾಡಿ ಪಕ್ಷಕ್ಕೆ ಮುಜುಗರ ಉಂಟು ಮಾಡಿರುವ ಚಂದ್ರಕಲಾ ಅವರ ಕ್ರಮ ಖಂಡನೀಯವಾಗಿದ್ದು, ಕೆಪಿಸಿಸಿ ಗಮನ ಸೆಳೆಯಲಾಗುವುದು ಎಂದರು.
ಯಾರೇ ಆಗಲಿ ಪಕ್ಷದಲ್ಲಿ ಅಧಿಕಾರ ಅನುಭವಿಸುತ್ತಾ ಪಕ್ಷ ವಿರೋಧಿ ಹೇಳಿಕೆ ಅಥವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಅಂತಹವರನ್ನು ಕ್ಷಮಿಸಲು ಸಾಧ್ಯವಿಲ್ಲ. ಇವರುಗಳ ವಿರುದ್ಧ ಶಿಸ್ತು ಕ್ರಮಕ್ಕೆ ಹೈಕಮಾಂಡ್‍ಗೆ ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದರು. ಕಾಂಗ್ರೆಸ್ ಮಾನವೀಯ ನೆಲೆಗಟ್ಟಿನ ಪಕ್ಷವಾಗಿದ್ದು, ಬಿಜೆಪಿ ಇದಕ್ಕೆ ತದ್ವಿರುದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಟಾಟು ಮೊಣ್ಣಪ್ಪ ಟೀಕಿಸಿದರು.
ಯಾರನ್ನೋ ಮೆಚ್ಚಿಸುವುದಕ್ಕಾಗಿ ಚಂದ್ರಕಲಾ ಅವರು ಮೋದಿ ಅವರನ್ನು ಶಕ್ತಿ ಎಂದು ಬಣ್ಣಿಸಿರುವುದು ಹಾಸ್ಯಾಸ್ಪದವಾಗಿದೆ. ಪ್ರಧಾನಮಂತ್ರಿಗಳು ಒಬ್ಬ ಶಕ್ತಿಯುತ ವ್ಯಕ್ತಿಯೇ ಆಗಿದ್ದರೆ ದೇಶ ಮತ್ತು ದೇಶದ ಜನ ಕಳೆದ ಐದು ವರ್ಷಗಳಿಂದ ಇಷ್ಟೊಂದು ಕಷ್ಟ ನಷ್ಟಗಳನ್ನು ಅನುಭವಿಸಲು ಸಾಧ್ಯವೇ ಆಗುತ್ತಿರಲಿಲ್ಲ. ಆಡಳಿತ ವೈಫಲ್ಯದಿಂದ ರೈತರು, ಕಾರ್ಮಿಕರು, ಸಣ್ಣ ಉದ್ದಿಮೆದಾರರು, ದಿನಗೂಲಿ ನೌಕರರು ಸೇರಿದಂತೆ ಎಲ್ಲಾ ವರ್ಗದ ಜನರು ಸಂಕಷ್ಟದಲ್ಲೇ ಜೀವನ ಸಾಗಿಸುವಂತ್ತಾಗಿದೆ. ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ನೆರವಿಗೆ ಬಾರದ ಪ್ರಧಾನಮಂತ್ರಿಗಳು ಇದೀಗ ಕೊರೋನಾ ಸೋಂಕು ಹರಡುವುದನ್ನು ತಡೆಯುವಲ್ಲಿಯೂ ಸಂಪೂರ್ಣವಾಗಿ ವಿಫಲರಾಗುತ್ತಿದ್ದಾರೆ. ಕೇವಲ ಪ್ರಚಾರ ಗಿಟ್ಟಿಸಿಕೊಳ್ಳುವ ಮೂಲಕವೇ ಅಭಿವೃದ್ಧಿಯ ಪೊಳ್ಳು ಭರವಸೆಗಳನ್ನು ನೀಡುತ್ತಿರುವ ಪ್ರಧಾನಮಂತ್ರಿಗಳು ಆರ್ಥಿಕ ಹಿನ್ನಡೆಯಿಂದ ಕೈಚೆಲ್ಲಿ ಕುಳಿತ್ತಿದ್ದಾರೆ ಎಂದು ಆರೋಪಿಸಿರುವ ಟಾಟು ಮೊಣ್ಣಪ್ಪ ನಿಶಕ್ತ ಸರ್ಕಾರದ ನಾಯಕನ ಬಣ್ಣನೆಯನ್ನು ಕಾಂಗ್ರೆಸ್ ಸಹಿಸಲು ಸಾಧ್ಯವಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿಯ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗುತ್ತಿದ್ದು, ಕಾರ್ಯಕರ್ತರು ಸಂಘಟಿತರಾಗುತ್ತಿದ್ದಾರೆ ಎಂದು ಅವರು ಇದೇ ಸಂದರ್ಭ ತಿಳಿಸಿದ್ದಾರೆ.