ಕೊಡಗಿನಲ್ಲಿ ಕೊರೋನಾ ಸೋಂಕು : ಕುಶಾಲನಗರದ ದಂಡಿನಪೇಟೆಯ ವ್ಯಕ್ತಿ ಸಾವು

06/07/2020

ಕೊಡಗು ಜಿಲ್ಲೆಯಲ್ಲಿ ಹೊಸದಾಗಿ ಎರಡು ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ಕುಶಾಲನಗರದ ದಂಡಿನಪೇಟೆಯ ವ್ಯಕ್ತಿಯೊಬ್ಬರು ತೀವ್ರ ಉಸಿರಾಟದ ತೊಂದರೆಯಿಂದ ಸಾವನ್ನಾಪ್ಪಿದ್ದಾರೆ.

ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸೋಮವಾರಪೇಟೆ ತಾಲ್ಲೂಕು ಕುಶಾಲನಗರದ ದಂಡಿನಪೇಟೆಯ 58 ವರ್ಷದ ಪುರುಷ ವ್ಯಕ್ತಿಯೊಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿರುತ್ತದೆ. ಇವರು ಜು. 4 ರಂದು ಸಂಜೆ 4 ಗಂಟೆಗೆ ಕುಶಾಲನಗರದ ಖಾಸಗಿ ಆಸ್ಪತ್ರೆಯಿಂದ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದು, ಅದೇ ದಿನ ಸಂಜೆ 4.30 ಗಂಟೆಗೆ ಮೃತಪಟ್ಟಿರುತ್ತಾರೆ.

ಸೋಮವಾರಪೇಟೆ ತಾಲ್ಲೂಕು ಕುಶಾಲನಗರದ ಬಸವನಹಳ್ಳಿಯ 31 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಇವರ ಪತ್ನಿ ಆರೋಗ್ಯ ಕಾರ್ಯಕರ್ತರಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕುಶಾಲನಗರದ ದಂಡಿನ ಪೇಟೆ ಮತ್ತು ಬಸವನಹಳ್ಳಿಯಲ್ಲಿ ಎರಡು ನಿಯಂತ್ರಿತ ಪ್ರದೇಶವನ್ನು ತೆರೆಯಲಾಗಿದೆ.

ಹೀಗಾಗಿ ಜಿಲ್ಲೆಯಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ:78 ಕ್ಕೇರಿದ್ದು, ಸಾವನ್ನಪ್ಪಿರುವ ಪ್ರಕರಣ-01, ಗುಣಮುಖ-3, ಸಕ್ರಿಯ ಪ್ರಕರಣ-74 ಮತ್ತು ಜಿಲ್ಲೆಯಲ್ಲಿ ತೆರೆಯಲಾಗಿರುವ ಒಟ್ಟು ನಿಯಂತ್ರಿತ ಪ್ರದೇಶಗಳು 32 ಆಗಿರುತ್ತದೆ.

ಜಿಲ್ಲೆಯಲ್ಲಿ ಸಂಭವಿಸಿದ ಮೊದಲ ಕೋವಿಡ್ ಸಾವಿನ ವಿವರ:

ದಿನಾಂಕ:04-07-2020 ರಂದು ಕುಶಾಲನಗರದ 58 ವರ್ಷದ ಪುರುಷರೊಬ್ಬರನ್ನು ಉಸಿರಾಟದ ತೊಂದರೆ ಮೇರೆಗೆ ಕುಶಾಲನಗರದ ಖಾಸಗಿ ಆಸ್ಪತ್ರೆಯಿಂದ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿದ್ದು, ಅವರು ದಿನಾಂಕ:04-07-2020 ರಂದು ಸಂಜೆ 4.00 ಗಂಟೆಗೆ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಸದರಿ ವ್ಯಕ್ತಿಗೆ ಉಸಿರಾಟದ ತೊಂದರೆ ಇದ್ದ ಕಾರಣ ತುರ್ತಾಗಿ ಚಿಕಿತ್ಸೆಯನ್ನು ಪ್ರಾರಂಭಿಸಿದ್ದರೂ ಸಹ ಕೋವಿಡ್ ಆಸ್ಪತ್ರೆಗೆ ದಾಖಲಾದ ಅರ್ಧ ಗಂಟೆಯಲ್ಲೇ ಅಂದರೆ ಸಂಜೆ ಅಂದಾಜು 4.30 ಗಂಟೆಗೆ ಮರಣ ಹೊಂದಿರುತ್ತಾರೆ.  


ಮೃತ ವ್ಯಕ್ತಿಯ ಆರೋಗ್ಯ ಮತ್ತು ಚಿಕಿತ್ಸೆ ಪಡೆದಿರುವ ಇತಿಹಾಸವನ್ನು ಪರಿಶೀಲಿಸಲಾಗಿ, ಮೃತ ವ್ಯಕ್ತಿಯು ಸುಮಾರು 10 ವರ್ಷಗಳಿಂದ ಸಕ್ಕರೆ ಖಾಯಿಲೆ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದುದಾಗಿ ತಿಳಿದು ಬಂದಿರುತ್ತದೆ.   


ಮುಂದುವರೆದು ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತದಿಂದ ಮೃತ ವ್ಯಕ್ತಿಯ ಗಂಟಲು/ಮೂಗು ದ್ರವ ಮಾದರಿಯನ್ನು ಕೋವಿಡ್ ಪರೀಕ್ಷೆಗಾಗಿ ತೆಗೆದು, ಮೃತ ವ್ಯಕ್ತಿಯು ಕೋವಿಡ್ ಆಸ್ಪತ್ರೆಯಲ್ಲಿ ಮೃತ ಪಟ್ಟ ಕಾರಣ ಕೋವಿಡ್ ಸೋಂಕಿನಿಂದ ಮೃತಪಟ್ಟಲ್ಲಿ ಶವ ಸಂಸ್ಕಾರಕ್ಕೆ ಸರ್ಕಾರದ ಮಾರ್ಗಸೂಚಿಯಂತೆ ಅನುಸರಿಸಬೇಕಾದ ಕಾರ್ಯ ವಿಧಾನವನ್ನು ಅನುಸರಿಸಿ ಮೃತದೇಹವನ್ನು ದಿನಾಂಕ:05-07-2020 ರಂದು  ಸಂಸ್ಕಾರ ಮಾಡಲಾಗಿರುತ್ತದೆ. 


ಈಗ ಕೋವಿಡ್ ಪರೀಕ್ಷೆಯ ವರದಿ ಬಂದಿದ್ದು, ಮೃತಪಟ್ಟ ವ್ಯಕ್ತಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿರುತ್ತದೆ.  

ಇದರಿಂದ ಇದು ಜಿಲ್ಲೆಯಲ್ಲಿ ಕೋವಿಡ್ ನಿಂದ ಸಂಭವಿಸಿದ ಮೊದಲ ಸಾವು ಎಂದು ಪರಿಗಣಿಸಬೇಕಾಗಿದೆ.  ಜಿಲ್ಲಾಡಳಿತದಿಂದ ಮೃತದೇಹವನ್ನು ಮುನ್ನೆಚ್ಚರಿಕಾ ಕ್ರಮವಾಗಿ ಕೋವಿಡ್ ಸೋಂಕಿನಿಂದ ಮೃತಪಟ್ಟಲ್ಲಿ ಶವ ಸಂಸ್ಕಾರಕ್ಕೆ ಸರ್ಕಾರದ ಮಾರ್ಗಸೂಚಿಯಂತೆ ಅನುಸರಿಸಬೇಕಾದ ಕಾರ್ಯ ವಿಧಾನವನ್ನು ಅನುಸರಿಸಿಯೇ ಮೃತದೇಹವನ್ನು ಸಂಸ್ಕಾರ ಮಾಡಿರುವುದರಿಂದ ಜನರು ಯಾವುದೇ ಭಯ ಪಡುವ ಅಗತ್ಯ ಇರುವುದಿಲ್ಲ.