ರಾಷ್ಟ್ರಪತಿಯನ್ನು ಭೇಟಿಯಾದ ಪ್ರಧಾನಿ

ನವದೆಹಲಿ ಜು.6 : ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಭವನದಲ್ಲಿ ಭಾನುವಾರ ಬೆಳಗ್ಗೆ ಭೇಟಿ ಮಾಡಿ ಪ್ರಸಕ್ತ ವಿದ್ಯಮಾನಗಳು, ಭಾರತ-ಚೀನಾ ಗಡಿ ಭಾಗದಲ್ಲಿ ಸೇನೆ ನಿಲುಗಡೆ ಇತ್ಯಾದಿಗಳ ಬಗ್ಗೆ ವಿವರಣೆ ನೀಡಿದ್ದಾರೆ.
ಮೊನ್ನೆ ಶುಕ್ರವಾರ ಲಡಾಕ್ ನ ನಿಮ್ಮೂನ್ ಬ್ರಿಗೇಡ್ ಕೇಂದ್ರ ಕಚೇರಿಗೆ ಭೇಟಿ ನೀಡಿ ಅಲ್ಲಿನ ಯೋಧರನ್ನು ಮಾತನಾಡಿಸಿ ಮನೋಸ್ಥೈರ್ಯ ತುಂಬಿ, ಕಳೆದ ಜೂನ್ 15ರಂದು ನಡೆದ ಸಂಘರ್ಷದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯೋಧರ ಆರೋಗ್ಯ ವಿಚಾರಿಸಿ ಬಂದ ನಂತರ ರಾಷ್ಟ್ರಪತಿಗಳನ್ನು ಪ್ರಧಾನಿಗಳು ಭೇಟಿ ಮಾಡಿ ಹಲವು ವಿಷಯಗಳನ್ನು ತಿಳಿಸಿದ್ದಾರೆ.
ಭಾರತ-ಚೀನಾ ಮಿಲಿಟರಿ ಕಮಾಂಡರ್ ಗಳ ಮಟ್ಟದಲ್ಲಿ ಕಳೆದ 15ರಂದು ನಡೆದ ಸಂಘರ್ಷದ ನಂತರ ಕೂಡ ಹಲವು ಸುತ್ತಿನ ಮಾತುಕತೆ ನಡೆದಿದೆ. ಆದರೆ ಇದು ಫಲಪ್ರದವಾಗಿ ಚೀನಾ ಸೇನೆಯನ್ನು ಗಡಿಭಾಗದಿಂದ ಹಿಂಪಡೆದಿಲ್ಲ. ಸೇನೆಯನ್ನು ಹಿಂಪಡೆಯದೆ ಶಾಂತಿ ಮಾತುಕತೆಗೆ ಸಿದ್ದವಿಲ್ಲ ಎಂದು ಭಾರತೀಯ ಸೇನೆ ಹಠ ಹಿಡಿದು ಕುಳಿತಿದೆ.
ಮುಂದಿನ ದಿನಗಳಲ್ಲಿ ಒಂದು ವೇಳೆ ಯುದ್ಧ ಪರಿಸ್ಥಿತಿ ಒದಗಿಬಂದರೆ ಭಾರತೀಯ ವಾಯುಪಡೆ ಸರ್ವ ಸನ್ನದ್ಧವಾಗಿದೆ. ಚೀನಾದ ಗಡಿ ವಾಸ್ತವ ರೇಖೆಯ ಫಾರ್ವರ್ಡ್ ಬೇಸ್ ನಲ್ಲಿ ಭಾರತೀಯ ವಾಯುಪಡೆ ಈಗಾಗಲೇ ವಾಯು ಕಾರ್ಯಾಚರಣೆಯನ್ನು ನಡೆಸುತ್ತಿದೆ. ಗಡಿ ವಾಸ್ತವ ನಿಯಂತ್ರಣ ರೇಖೆ ಬಳಿ ವಾಯು ಕಾರ್ಯಾಚರಣೆ ನಡೆಸಲು ಸುಖೊಯ್ ಸು-30 ಎಂಕೆಐ, ಮಿಗ್-29 ಮತ್ತು ಯುದ್ಧ ಹೆಲಿಕಾಪ್ಟರ್ ಗಳಾದ ಅಪಚೆಗಳು ಹಾರಾಟ ಕಾರ್ಯಾಚರಣೆ ನಡೆಸುತ್ತಿವೆ ಎಂಬ ಮಾಹಿತಿ ಸಿಕ್ಕಿದೆ.
