ಕೊರೋನಾ ಹೆಸರಿನಲ್ಲಿ ಅವ್ಯವಹಾರ : ಕುಶಾಲನಗರ ಕಾಂಗ್ರೆಸ್ ಉಸ್ತುವಾರಿ ಪ್ರದೀಪ್ ರೈ ಆರೋಪ

06/07/2020

ಮಡಿಕೇರಿ ಜು.6 : ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೊರೋನಾ ಹೆಸರಿನಲ್ಲಿ ಹಗಲು ದರೋಡೆ ನಡೆಸುತ್ತಿದ್ದು, ಕೊರೋನಾ ಪರೀಕ್ಷೆ ಮತ್ತು ಸುರಕ್ಷತಾ ಉಪಕರಣಗಳ ಖರೀದಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿರುವ ಬಗ್ಗೆ ಸಂಶಯವಿದೆ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ಹಾಗೂ ಕೊಡಗು ಜಿಲ್ಲಾ ಕೆಪಿಸಿಸಿ ಸಂಯೋಜಕ ಪ್ರದೀಪ್ ರೈ ಪಾಂಬಾರು ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಸ್ಕ್ ಹಾಗೂ ಕೋವಿಡ್ ಟೆಸ್ಟ್ ಕಿಟ್‍ಗೆ ಮಾರುಕಟ್ಟೆ ಬೆಲೆಗಿಂತ ಮೂರು ಪಟ್ಟು ಹೆಚ್ಚಿಗೆ ಬೆಲೆ ನೀಡಿರುವುದು ಮತ್ತು ಸೋಂಕಿತರ ದಿನ ಖರ್ಚು ಐದು ಪಟ್ಟು ಏರಿಕೆಯಾಗಿರುವುದು ಕಂಡು ಬಂದಿದೆ. ಥರ್ಮಲ್ ಸ್ಕೇನರ್, ಆಮ್ಲಜನಕ ಸಿಲಿಂಡರ್, ಗ್ಲೌಸ್, ಪಿಪಿಇ ಕಿಟ್, ವೆಂಟೆಲೇಟರ್ ಈ ಎಲ್ಲಾ ಉಪಕರಣಗಳ ಸಲಕರಣೆಗಳ ಖರೀದಿಯಲ್ಲಿ ದುಪ್ಪಟ್ಟು ಲೆಕ್ಕ ತೋರಿಸಿ ರಾಜ್ಯದ ಜನತೆಯ ಹಣವನ್ನು ಹಗಲು ದರೋಡೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಕೊರೋನಾಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳ ಲೆಕ್ಕಪತ್ರಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಒತ್ತಾಯಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದ್ದು, ಬಂದ ರೋಗಿಗಳನ್ನು ದಾಖಲು ಮಾಡಿಕೊಳ್ಳದ ಪರಿಸ್ಥಿತಿ ನಿರ್ಮಾಣವಾಗಿದೆ. ವೈರಸ್ ಹರಡುವಿಕೆ ಕಡಿಮೆ ಇದ್ದಾಗ ಲಾಕ್‍ಡೌನ್ ಮಾಡಲಾಗಿದೆ. ಇದೀಗ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ರಾತ್ರಿ ಮಾತ್ರ ಲಾಕ್‍ಡೌನ್ ಮಾಡುವುದರಿಂದ ಕೊರೋನಾ ನಿಯಂತ್ರಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಆಡಳಿತರೂಢ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನಪರ ಆಡಳಿತ ನಡೆಸುವಲ್ಲಿ ವಿಫಲವಾಗಿದೆ. ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ ಜನಸಾಮಾನ್ಯರ ಮೇಲೆ ಜಿಎಸ್‍ಟಿ ಹೇರಿಕೆ ಮಾಡಿ ಜನ ಸಾಮಾನ್ಯರಿಂದ ಸುಲಿಗೆ ಮಾಡಿ ಅವರ ಆರ್ಥಿಕ ಬದುಕನ್ನು ಕಿತ್ತುಕೊಂಡಿದೆ ಎಂದು ಪ್ರದೀಪ್ ರೈ ಆರೋಪಿಸಿದರು.
ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಬಡವರು, ಕೂಲಿ ಕಾರ್ಮಿಕರು, ರೈತರು ಜೀವನ ಸಾಗಿಸುವುದೇ ಕಷ್ಟವಾಗಿದೆ. ಹಿಂದೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ತೈಲೋತ್ಪನ್ನಗಳ ಬೆಲೆಯನ್ನು ಒಂದು ರೂಪಾಯಿ ಏರಿಕೆ ಮಾಡಿದರೂ ಬೀದಿಗಳಿದು ಹೋರಾಟ ಮಾಡುತ್ತಿದ್ದ ಮೋದಿ ಭಕ್ತರು ಈಗ ಯಾಕೆ ಮೌನಕ್ಕೆ ಶರಣಾಗಿದ್ದಾರೆ ಎಂದು ಪ್ರಶ್ನಿಸಿದರು.
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ಅನಂತಕುಮಾರ್ ಮಾತನಾಡಿ, ಕೊಡಗಿನ ಇಬ್ಬರು ಶಾಸಕರ ಸಾಧನೆ ಶೂನ್ಯ ಎಂದು ಟೀಕಿಸಿದರು.
ಕಳೆದ ವರ್ಷ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಸಂತ್ರಸ್ತರಾದವರಿಗೆ ಮನೆ ನಿರ್ಮಿಸಿ ಕೊಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ಕಾರಿ ಆಸ್ಪತ್ರೆಗಳು ಮೂಲಭೂತ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿದ್ದು, ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
::: ಇಂದು ಪ್ರತಿಭಟನೆ :::
ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು, ರೈತ, ಕಾರ್ಮಿಕ ವಿರೋಧಿ ನೀತಿಯನ್ನು ನಿಲ್ಲಿಸಬೇಕು, ರೈತರ ಸಾಲ ಮನ್ನಾ ಮಾಡಬೇಕು, ಪ್ರಾಕೃತಿಕ ವಿಕೋಪದ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜು.7 ರಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಾಡ ಕಚೇರಿ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅನಂತಕುಮಾರ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಕುಶಾಲನಗರ ನಗರ ಅಧ್ಯಕ್ಷ ಶರೀಫ್ ಇಬ್ರಾಹಿಂ, ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ಜನಾರ್ಧನ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರು ರವೀಂದ್ರ ಹಾಗೂ ಅಸಂಘಟಿತ ಕಾರ್ಮಿಕ ಸಂಘದ ರಾಜ್ಯ ಕಾರ್ಯದರ್ಶಿ ಅಶ್ರಫ್ ಉಪಸ್ಥಿತರಿದ್ದರು.