ಕೊಡಗಿನಲ್ಲಿ 10 ಮಂದಿ ಗುಣಮುಖ : 67 ಮಂದಿಗೆ ಚಿಕಿತ್ಸೆ

06/07/2020

ಮಡಿಕೇರಿ ಜು.6 : ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಒಳಗಾಗಿರುವ 78 ಮಂದಿಯ ಪೈಕಿ ಸೋಮವಾರ ಏಳು ಮಂದಿ ಗುಣಮುಖರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ 10 ಮಂದಿ ಕೋವಿಡ್-19 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದ್ದು, ಇನ್ನೂ 67 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 9777 ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 8810 ಮಂದಿಯ ವರದಿ ನೆಗೆಟಿವ್ ಬಂದಿದ್ದರೆ, 78 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಅವರ ಪೈಕಿ ಒಬ್ಬರು ಭಾನುವಾರ ಮೃತಪಟ್ಟಿದ್ದು, 10 ಮಂದಿ ಗುಣಮುಖರಾಗಿದ್ದಾರೆ. ಇನ್ನುಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರೊಂದಿಗೆ 105 ಮಂದಿ ಶಂಕಿತರು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, 889 ಮಂದಿ ವರದಿಯ ನಿರೀಕ್ಷೆಯಲ್ಲಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಇತರೆ ದೇಶ, ರಾಜ್ಯಗಳಿಂದ ಪಾಸ್‍ಗಳನ್ನು ಪಡೆದು ಜಿಲ್ಲೆಗೆ ಪ್ರವೇಶಿಸಿರುವ ಜನರನ್ನು ಕಡ್ಡಾಯವಾಗಿ ನಿಯಮಾನುಸಾರ ಸಂಪರ್ಕ ತಡೆಯಲ್ಲಿಡಲಾಗುತ್ತಿದ್ದು, ಅದರಂತೆ ಕಳೆದ 14 ದಿನಗಳಲ್ಲಿ ವಿದೇಶದಿಂದ ಬಂದಿರುವ 41, ಇತರ ರಾಜ್ಯದ 726 ಮಂದಿ ಸೇರಿದಂತೆ 767 ಮಂದಿ ಸಂಪರ್ಕ ತಡೆಯಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.