ಹುಟ್ಟಿದ್ದು ಕ್ರೈಸ್ತನಾಗಿ, ಬದುಕಿದ್ದು ಮುಸಲ್ಮಾನನಾಗಿ, ಶವ ಸಂಸ್ಕಾರವಾಗಿದ್ದು ಹಿಂದೂ ಸಂಪ್ರದಾಯದಲ್ಲಿ : ಶನಿವಾರಸಂತೆ ಗೋಪಾಲಪುರ ಗ್ರಾಮದಲ್ಲಿ ಪ್ರಕರಣ

06/07/2020

ಮಡಿಕೇರಿ ಜು.6 : ಸತ್ತ ವ್ಯಕ್ತಿಗೆ ಹೆಂಡತಿ, ಮಕ್ಕಳು ಸಂಬಂಧಿಕರು ಇದ್ದರೂ ಅಂತ್ಯಕ್ರಿಯೆಗೆ ಬಾರದ ಅಮಾನವೀಯ ಪ್ರಕರಣ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸಮೀಪದ ಗೋಪಾಲಪುರ ಗ್ರಾಮದಲ್ಲಿ ನಡೆದಿದೆ.
ಗೋಪಾಲಪುರ ಗ್ರಾಮದ ನಿವಾಸಿ ಯೂಸುಫ್ ಅಲಿಯಾಸ್ ವರ್ಗಿಸ್ (68) ಸತ್ತ ವ್ಯಕ್ತಿ.
ಮೂಲತ: ಕ್ರೈಸ್ತ ಧರ್ಮದವರಾದ ವರ್ಗಿಸ್ ಕೆಲವು ವರ್ಷಗಳ ಹಿಂದೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು ಯೂಸುಫ್ ಎಂದು ಹೆಸರು ಬದಲಾಯಿಸಿಕೊಂಡಿದ್ದರು. ಯೂಸುಫ್‍ಗೆ ಹೆಂಡತಿ, ಮೂವರು ಮಕ್ಕಳಿದ್ದು ಕೆಲವು ದಿನಗಳಿಂದ ಅವರುಗಳು ಮಂಗಳೂರಿನಲ್ಲಿ ವಾಸವಾಗಿದ್ದ ಹಿನ್ನೆಲೆಯಲ್ಲಿ ಯೂಸುಫ್ ಒಬ್ಬರೇ ಗೋಪಾಲಪುರದಲ್ಲಿ ವಾಸವಾಗಿದ್ದರು.
ವಯೋ ಸಹಜ ಆನಾರೋಗ್ಯ ಸಮಸ್ಯೆಯಿಂದ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ಯೂಸುಫ್ ಜು.4 ರಂದು ಮೃತಪಟ್ಟಿದ್ದಾರೆ. ಸತ್ತ ವ್ಯಕ್ತಿಯ ಸಂಬಂಧಿಕರು ಯಾರೂ ಆಸ್ಪತ್ರೆಗೆ ಬಾರದ ಹಿನ್ನೆಲೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಅನಾಥ ಶವ ಎಂದು ಪರಿಗಣಿಸಿ ಮೃತದೇಹವನ್ನು ಶವಾಗಾರದಲ್ಲಿ ಇಟ್ಟಿದ್ದರು. ಅನಾಥ ಶವದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಲಾಗಿತ್ತು.
ಮಾಹಿತಿ ತಿಳಿದ ಗೋಪಾಲಪುರದ ಸ್ಥಳೀಯರು ಮತ್ತು ಕರವೇ ಕಾರ್ಯಕರ್ತರು ಮೃತ ವ್ಯಕ್ತಿಯ ಹೆಂಡತಿ, ಮಕ್ಕಳು ಮತ್ತು ಸಂಬಂಧಿಕರಿಗೆ ಮಾಹಿತಿ ನೀಡಿದರೂ ಯಾರು ಬಾರದ ಹಿನ್ನೆಲೆಯಲ್ಲಿ ಸ್ಥಳೀಯರು ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಸೇರಿಕೊಂಡು ಮಡಿಕೇರಿ ಆಸ್ಪತ್ರೆಯ ಶವಾಗಾರದಲ್ಲಿದ್ದ ಮೃತದೇಹವನ್ನು ಗೋಪಾಲಪುರ ಗ್ರಾಮಕ್ಕೆ ತಂದು ಹಿಂದೂ ಸಂಪ್ರದಾಯದಂತೆ ವಿಧಿವಿಧಾನದಂತೆ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಮಾನವೀಯತೆ ಮೆರೆದರು. ಕ್ರೈಸ್ತ ಧರ್ಮದಲ್ಲಿ ಜನಿಸಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿ ಸತ್ತಾಗ ಸಂಬಂಧಿಕರು ಬಾರದಿದ್ದಾಗ ಹಿಂದೂ ಧರ್ಮದ ಪ್ರಕಾರ ಅಂತ್ಯಸಂಸ್ಕಾರ ಮಾಡಿರುವ ಅಪರೂಪದ ಪ್ರಕರಣವಿದು.