ದಂಡಿನಪೇಟೆ, ಗುಡ್ಡೆಹೊಸೂರು ಬಳಿಯ ಬಸವನಹಳ್ಳಿ ವ್ಯಾಪ್ತಿಯೂ ನಿರ್ಬಂಧಿತ ಪ್ರದೇಶ

06/07/2020

ಕುಶಾಲನಗರ ಜು.6 : ಕುಶಾಲನಗರ ವ್ಯಾಪ್ತಿಯಲ್ಲಿ ಎರಡು ಕೊರೊನ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಕುಶಾಲನಗರದ ದಂಡಿನಪೇಟೆ ಮತ್ತು ಗುಡ್ಡೆಹೊಸೂರು ಬಳಿಯ ಬಸವನಹಳ್ಳಿ ವ್ಯಾಪ್ತಿಯಲ್ಲಿ ನಿರ್ಬಂಧಿತ ವಲಯವನ್ನಾಗಿ ಘೋಷಣೆ ಮಾಡಲಾಗಿದೆ.
ಬೆಂಗಳೂರಿನಿಂದ ಕುಶಾಲನಗರದ ದಂಡಿನಪೇಟೆಗೆ ಕೆಲವು ದಿನಗಳ ಹಿಂದೆ ಬಂದಿದ್ದ 58 ವರ್ಷದ ವ್ಯಕ್ತಿಗೆ ಉಸಿರಾಟದ ಸಮಸ್ಯೆ ಕಂಡುಬಂದು ಮಡಿಕೇರಿ ಕೋವಿಡ್ ಆಸ್ಪತ್ರೆಗೆ ದಾಖಲಾದ ಸಂದರ್ಭ ಮೃತಪಟ್ಟಿರುವ ಘಟನೆ ಸೇರಿದಂತೆ ಬಸವನಹಳ್ಳಿಯ 31 ವರ್ಷದ ವ್ಯಕ್ತಿಯೊಬ್ಬನಿಗೆ ಕೊರೊನ ಸೋಂಕು ದೃಢಪಟ್ಟಿರುವ ಹಿನ್ನಲೆಯಲ್ಲಿ ಅಧಿಕಾರಿಗಳು ಈ ಕ್ರಮಕೈಗೊಂಡಿದ್ದಾರೆ.
ಮೃತ ವ್ಯಕ್ತಿ ತಪಾಸಣೆಗೆಂದು ತೆರಳಿದ್ದ ಮಡಿಕೇರಿ ರಸ್ತೆಯ ಖಾಸಗಿ ಆಸ್ಪತ್ರೆ ಪ್ರದೇಶವನ್ನು ತಹಶೀಲ್ದಾರ್ ಗೋವಿಂದರಾಜು 14 ದಿನಗಳ ಕಾಲ ಸೀಲ್‍ಡೌನ್ ಮಾಡಿ ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಅಲ್ಲಿನ ವೈದ್ಯರು ಸೇರಿ 7 ಮಂದಿಯನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಮೃತ ವ್ಯಕ್ತಿಯ ಟ್ರಾವಲ್ ಹಿಸ್ಟರಿ ಪತ್ತೆಹಚ್ಚಲಾಗುತ್ತಿದೆ ಎಂದು ಸೋಮವಾರಪೇಟೆ ತಹಶೀಲ್ದಾರ್ ಗೋವಿಂದರಾಜ್ ತಿಳಿಸಿದ್ದಾರೆ.