ಜಿಲ್ಲೆಯಲ್ಲಿ ಮತ್ತೆ 14 ಪಾಸಿಟಿವ್ ಪ್ರಕರಣ ಪತ್ತೆ : 10 ಮಂದಿ ಗುಣಮುಖ

07/07/2020

ಮಡಿಕೇರಿ ಜು.7 : ಕೊಡಗು ಜಿಲ್ಲೆಯಲ್ಲಿ ಕೊರೋನಾ ಆತಂಕ ಹೆಚ್ಚುತ್ತಲೇ ಇದ್ದು, ಇಂದು 14 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 92ಕ್ಕೆ ಏರಿಕೆಯಾಗಿದ್ದು, ಇವರಲ್ಲಿ 10 ಮಂದಿ ಗುಣಮುಖವಾಗಿದ್ದು, ಒಬ್ಬರು ಸಾವಿಗೀಡಾಗಿದ್ದಾರೆ. 81 ಮಂದಿಗೆ ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಂಗಳವಾರ ಒಂದೇ ದಿನ 14 ಪಾಸಿಟಿವ್ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿದ್ದು, ಜಿಲ್ಲೆಯ ಗಡಿ ಭಾಗಗಳಾದ ಕರಿಕೆ, ಪೆರುಂಬಾಡಿ, ತಿತಿಮತಿ ಗ್ರಾಮಗಳಲ್ಲೂ ಕೋವಿಡ್-19ರ ಛಾಯೆ ಆವರಿಸಿದೆ.
ಈ ಹಿಂದಿನ ಸೋಂಕಿತರ ಪೈಕಿ ಸೋಮವಾರ ಏಳು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡ ಬೆನ್ನಲ್ಲೇ, ಮಂಗಳವಾರ ಅದರ ದುಪ್ಪಟ್ಟು ಜನರಲ್ಲಿ ಸೋಂಕು ಕಾಣಿಸಿಕೊಳ್ಳುವುದರೊಂದಿಗೆ ಜನರನ್ನು ಆತಂಕಕ್ಕೆ ತಳ್ಳಿದೆ.
ಮಂಗಳವಾರ ಬೆಳಗ್ಗೆ ದೊರೆತ ಮಾಹಿತಿಯನ್ವಯ ವೀರಾಜಪೇಟೆ ತಾಲೂಕಿನ ಗೋಣಿಕೊಪ್ಪದ ಹರಿಶ್ಚಂದ್ರಪುರದ ಜ್ವರ ಲಕ್ಷಣಗಳಿದ್ದ 23 ವರ್ಷದ ಮಹಿಳೆ ಹಾಗೂ ನೇತಾಜಿ ಲೇಔಟ್‍ನ 50 ವರ್ಷದ ಪುರುಷ ಆರೋಗ್ಯ ಕಾರ್ಯಕರ್ತರೊಬ್ಬರಲ್ಲಿ ಸೋಂಕು ದೃಢ ಪಟ್ಟಿದೆ.
::: ವೀರಾಜಪೇಟೆಯ 7ಮಂದಿಗೆ ಸೋಂಕು :::
ಮತ್ತೊಂದೆಡೆ ವೀರಾಜಪೇಟೆ ತಾಲೂಕಿನ ತಿತಿಮತಿಯ ಆರೋಗ್ಯ ಕಾರ್ಯಕರ್ತರ ವಾಹನ ಚಾಲಕರಾಗಿರುವ 54 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢ ಪಟ್ಟಿದ್ದು, ಇವರು ತಿತಿಮತಿಯ ವಸತಿ ಗೃಹದಲ್ಲಿ ವಾಸವಾಗಿದ್ದಾರೆ.
ಬೆಂಗಳೂರಿನಿಂದ ಪ್ರಯಾಣಿಸಿರುವ ಇತಿಹಾಸವಿರುವ ವೀರಾಜಪೇಟೆ ತಾಲೂಕಿನ ಅರ್ಜಿ ಗ್ರಾಮದ ಪೆರುಂಬಾಡಿಯ ಒಂದೇ ಕುಟುಂಬದ 56 ವರ್ಷದ ಪುರುಷ, 36 ವರ್ಷದ ಮಹಿಳೆ ಮತ್ತು 12 ವರ್ಷದ ಬಾಲಕಿಗೂ ಸೋಂಕು ಕಾಣಿಸಿಕೊಂಡಿದೆ. ವೀರಾಜಪೇಟೆ ತಾಲೂಕು ಶ್ರೀಮಂಗಲ ಗ್ರಾಮದ ಜ್ವರ ಲಕ್ಷಣಗಳಿದ್ದ 34 ವರ್ಷದ ಮಹಿಳೆಯೊಬ್ಬರಲ್ಲೂ ಸೋಂಕು ದೃಢಪಟ್ಟಿದೆ.
::: ಮಡಿಕೇರಿಯಲ್ಲಿ 6 ಮಂದಿಯಲ್ಲಿ ಪತ್ತೆ :::
ಮಡಿಕೇರಿ ತಾಲೂಕಿನ ಕರಿಕೆ ಗ್ರಾಮದ ಜ್ವರ ಲಕ್ಷಣಗಳಿದ್ದ 29 ವರ್ಷ ಹಾಗೂ 50 ವರ್ಷದ ಪುರುಷರಿಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಈ ಹಿಂದೆ ಸೋಂಕು ದೃಢಪಟ್ಟಿದ್ದ ಮಡಿಕೇರಿಯ ಆಸ್ಪತ್ರೆ ವಸತಿ ಗೃಹದ ಆರೋಗ್ಯ ಕಾರ್ಯಕರ್ತರ ಪ್ರಾಥಮಿಕ ಸಂಪರ್ಕವಾದ 39 ವರ್ಷದ ಮಹಿಳೆ, 38 ವರ್ಷದ ಪುರುಷ ಮತ್ತು 18 ವರ್ಷದ ಹುಡುಗನೊಬ್ಬನಿಗೆ ಸೋಂಕು ದೃಢಪಟ್ಟಿದ್ದು, ಮಡಿಕೇರಿಯ ಅಶ್ವಿನಿ ಆಸ್ಪತ್ರೆಯಲ್ಲಿ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಪಿರಿಯಾಪಟ್ಟಣದ 17 ವರ್ಷದ ಹುಡುಗನಿಗೂ ಸೋಂಕು ದೃಢಪಟ್ಟಿದೆ.
ಸೋಮವಾರಪೇಟೆ ತಾಲೂಕಿನ ಬಳಗುಂದ ಗ್ರಾಮದಲ್ಲಿ ಸೋಂಕು ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 11 ವರ್ಷದ ಹುಡುಗನಲ್ಲೂ ಸೋಂಕು ದೃಢ ಪಟ್ಟಿದೆ.
7ಹೊಸ ನಿಯಂತ್ರಿತ ಪ್ರದೇಶಗಳು: ಜಿಲ್ಲೆಯಲ್ಲಿ ಹೊಸದಾಗಿ ವೀರಾಜಪೇಟೆ ತಾಲೂಕಿನ ಗೋಣಿಕೊಪ್ಪದ ಹರಿಶ್ಚಂದ್ರಪುರ, ನೇತಾಜಿ ಲೇ ಔಟ್, ತಿತಿಮತಿ ಆರೋಗ್ಯ ವಸತಿ ಗೃಹ, ಶ್ರೀಮಂಗಲ ಗ್ರಾಮ, ಆರ್ಜಿ ಗ್ರಾಮದ ಪೆರುಂಬಾಡಿ,
ಪೆರುಂಬಾಡಿ, ಅರ್ಜಿ ಗ್ರಾಮ, ವಿರಾಜಪೇಟೆ ತಾಲ್ಲೂಕು ಮಡಿಕೇರಿ ತಾಲೂಕಿನ ಕರಿಕೆ ಗ್ರಾಮದಲ್ಲಿ ಎರಡು ಸೇರಿದಂತೆ ಹೊಸದಾಗಿ 7ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದೆ.
ಈ ಹಿಂದೆ ತೆರೆಯಲಾಗಿದ್ದ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯ ಶಿರಂಗಾಲ, ಆಲೂರು ಸಿದ್ಧಾಪುರದ ದೊಡ್ಡಳ್ಳಿ ಮತ್ತು ಮಡಿಕೇರಿಯ ಓಂಕಾರೇಶ್ವರ ದೇವಸ್ಥಾನ ರಸ್ತೆ ನಿಯಂತ್ರಿತ ಪ್ರದೇಶಗಳನ್ನು 14 ದಿನ ಕಳೆದಿರುವುದರಿಂದ ಸಾರ್ವಜನಿಕರ ಓಡಾಟಕ್ಕೆ ಮುಕ್ತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಅಶ್ವಿನಿ ಆಸ್ಪತ್ರೆ ಮತ್ತೆ ಬಂದ್: ಕೋವಿಡೇತರ ಆರೋಗ್ಯ ಸೇವೆಗಳನ್ನು ನೀಡುತ್ತಿರುವ ಮಡಿಕೇರಿಯ ಅಶ್ವಿನಿ ಆಸ್ಪತ್ರೆಯನ್ನು ಮತ್ತೆ ಎರಡು ದಿನಗಳ ಕಾಲ ಮುಚ್ಚಲು ಜಿಲ್ಲಾಡಳಿತ ತೀರ್ಮಾನಿಸಿದೆ.
ಈ ಹಿಂದೆ ಸೋಂಕು ನಿವಾರಕಗೊಳಿಸಲು ಜೂ.25ರಿಂದ ತುರ್ತು ಮತ್ತು ಆಕಸ್ಮಿಕ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳನ್ನು ನಿಲ್ಲಿಸಲಾಗಿತ್ತಲ್ಲದೆ, ಸೋಂಕು ನಿವಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಂಗಳವಾರದಿಂದ ಎಲ್ಲಾ ಸೇವೆಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿತ್ತು.
ಆದರೆ ಮಡಿಕೇರಿಯ ಅಶ್ವಿನಿ ಆಸ್ಪತ್ರೆಯಲ್ಲಿ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಪಿರಿಯಾಪಟ್ಟಣದ 17 ವರ್ಷದ ಹುಡುಗನಿಗೆ ಕೋವಿಡ್ ಸೋಂಕು ದೃಢಪಟ್ಟಿರುವುದು ನಿನ್ನೆ ರಾತ್ರಿ ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ಮತ್ತೆ ಸೋಂಕು ನಿವಾರಕಗೊಳಿಸುವ ಉದ್ದೇಶಕ್ಕಾಗಿ ಜು.7ಮತ್ತು 8ರಂದು ತುರ್ತು ಮತ್ತು ಆಕಸ್ಮಿಕ ಸೇವೆಗಳನ್ನು ಹೊರತುಪಡಿಸಿ ಇತರ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.