ದೇಶದಲ್ಲಿ ಗೊಬ್ಬರದ ಕೊರತೆ ಇಲ್ಲ

07/07/2020

ನವದೆಹಲಿ ಜು.6 : ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ದೇಶಾದ್ಯಂತ ರಸಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಅವರು ಹೇಳಿದ್ದಾರೆ.
ರಾಜ್ಯ ಸರ್ಕಾರಗಳ ಜೊತೆ ಸಮಾಲೋಚನೆ ನಡೆಸಿ, ಅಗತ್ಯ ಪ್ರಮಾಣದಷ್ಟು ರಸಗೊಬ್ಬರವನ್ನು ಈಗಾಗಲೇ ರಾಜ್ಯಗಳಿಗೆ ಪೂರೈಸಿ, ದಾಸ್ತಾನು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನವದೆಹಲಿಯಲ್ಲಿಂದು ತಮ್ಮನ್ನು ಭೇಟಿ ಮಾಡಿದ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರೊಂದಿಗೆ ಸಮಾಲೋಚನೆ ನಡೆಸಿದ ನಂತರ ಈ ವಿಷಯ ತಿಳಿಸಿದ ಡಿ.ವಿ. ಸದಾನಂದಗೌಡ, ರಸಗೊಬ್ಬರ ಸಚಿವಾಲಯ ನಿರಂತರವಾಗಿ ರಸಗೊಬ್ಬರ ಲಭ್ಯತೆಯ ಬಗ್ಗೆ ತೀವ್ರ ನಿಗಾ ಇರಿಸಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರಿಂದ ಯೂರಿಯಾ ಪೂರೈಕೆಗೆ ಬೇಡಿಕೆ ಎದುರಾದರೆ ಅದನ್ನು ಪೂರೈಸಲು ಬದ್ಧವಿದೆ ಎಂದರು.
ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ರೈತರಿಗೆ ಸಕಾಲದಲ್ಲಿ ಕೈಗೆಟಕುವ ದರದಲ್ಲಿ ಸೂಕ್ತ ಪ್ರಮಾಣದ ರಸಗೊಬ್ಬರ ಪೂರೈಕೆಯನ್ನು ಖಾತ್ರಿಪಡಿಸಲು ಬದ್ಧವಾಗಿದೆ ಎಂದು ಅವರು ಹೇಳಿದರು.