ಮಡಿಕೇರಿಯ ಅಶ್ವಿನಿ ಆಸ್ಪತ್ರೆಯಲ್ಲಿ ತುರ್ತು ಮತ್ತು ಆಕಸ್ಮಿಕ ಸೇವೆಗಳು ಮಾತ್ರ ಲಭ್ಯ
07/07/2020

ಮಡಿಕೇರಿ ಜು. 7 : ಕೋವಿಡ್‍ಯೇತರ ಆರೋಗ್ಯ ಸೇವೆಗಳನ್ನು ನೀಡುತ್ತಿರುವ ಮಡಿಕೇರಿಯ ಅಶ್ವಿನಿ ಆಸ್ಪತ್ರೆಯನ್ನು ಈ ಹಿಂದೆ ಸೋಂಕು ನಿವಾರಕಗೊಳಿಸಲು ಆಸ್ಪತ್ರೆಯಲ್ಲಿ ತುರ್ತು ಮತ್ತು ಆಕಸ್ಮಿಕ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳನ್ನು ನಿರ್ಬಂಧಿಸಲಾಗಿತ್ತು, ಜೊತೆಗೆ ಇಂದಿನಿಂದ ಎಲ್ಲಾ ಸೇವೆಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿತ್ತು.
ಆದರೆ ನಗರದ ಅಶ್ವಿನಿ ಆಸ್ಪತ್ರೆಯಲ್ಲಿ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಪಿರಿಯಾಪಟ್ಟಣದ 17 ವರ್ಷದ ಹುಡುಗನಿಗೆ ಕೋವಿಡ್ ಸೋಂಕು ದೃಢಪಟ್ಟಿರುವುದು ಸೋಮವಾರ ರಾತ್ರಿ ವರದಿಯಾಗಿದೆ.
ಈ ನಿಟ್ಟಿನಲ್ಲಿ ಆಸ್ಪತ್ರೆಯನ್ನು ಮತ್ತೆ ಸೋಂಕು ನಿವಾರಕಗೊಳಿಸುವುದು ಅಗತ್ಯವಾಗಿದ್ದು, ಈ ಉದ್ದೇಶಕ್ಕಾಗಿ ಇಂದು ಜುಲೈ 7 ಮತ್ತು ಜುಲೈ 8 ರಂದು ಸದರಿ ಆಸ್ಪತ್ರೆಯಲ್ಲಿ ತುರ್ತು ಮತ್ತು ಆಕಸ್ಮಿಕ ಸೇವೆಗಳನ್ನು ಹೊರತುಪಡಿಸಿ ಬೇರಾವುದೇ ಕೋವಿಡ್‍ಯೇತರ ಸೇವೆಗಳನ್ನು ಸಾರ್ವಜನಿಕರಿಗೆ ನೀಡಲು ಸಾಧ್ಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
